ಬಂದ್‌ಗೆ ಕರೆ ನೀಡಿ ಬಿಜೆಪಿ ಅಪಹಾಸ್ಯಕ್ಕೀಡಾಗಿದೆ: ಎಚ್.ಎಚ್.ದೇವರಾಜ್ ಟೀಕೆ
"ಪ್ರಧಾನಿ ಕೊಟ್ಟ ಭರವಸೆಗಳ ಈಡೇರಿಕೆಗೂ ರಾಜ್ಯ ಬಂದ್ ಮಾಡಿ"

ಚಿಕ್ಕಮಗಳೂರು, ಮೇ 29: ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಾಲ ಮನ್ನಾ ಹೇಳಿಕೆಗೆ ಬದ್ಧನಾಗಿದ್ದು, ವಾರದೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕ್ರಮವಹಿಸುವುದಾಗಿ ಹೇಳಿಕೆ ನೀಡಿದ್ದರೂ ಮಾಜಿ ಸಿಎಂ ಯಡಿಯೂರಪ್ಪ ದಿಢೀರ್ ರಾಜ್ಯ ಬಂದ್‌ಗೆ ಕರೆ ನೀಡದ್ದಾರೆ. ಬಿಜೆಪಿ ಮುಖಂಡರ ಬಂದ್ ಕರೆಗೆ ರಾಜ್ಯದ ಜನತೆ ಬೆಂಬಲ ನೀಡದಿರುವುದರಿಂದ ಅಪಹಾಸ್ಯಕ್ಕೀಡಾಗಿದ್ದಾರೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ಬಿಜೆಪಿ ರಾಜ್ಯಾದಯಂತ ಬಂದ್‌ಗೆ ಕರೆ ನೀಡಿ ರಾಜಕೀಯವಾಗಿ ಲಾಭ ಪಡೆಯಲು ಹುನ್ನಾರ ನಡೆಸಿದೆ. ಈ ಬಂದ್‌ನ ಉದ್ದೇಶ ರೈತರ ಹಿತವಲ್ಲ, ಬಿಜೆಪಿ ಹಿತಕ್ಕಾಗಿ ಮಾಡಿದ ರಾಜಕೀಯ ಪ್ರೇರಿತವಾದ ಬಂದ್ ಆಗಿತ್ತು. ರಾಜ್ಯದ ಜನತೆಗೆ ಬಿಜೆಪಿಯ ಹುನ್ನಾರ ತಿಳಿದ ಪರಿಣಾಮ ಜನರು ಬಂದ್‌ಗೆ ಬೆಂಬಲ ನೀಡಲಿಲ್ಲ. ರಾಜ್ಯದ ಎಲ್ಲೆಡೆ ಬಂದ್ ನೀರಸವಾಗಿದ್ದು, ಇದರಿಂದಾಗಿ ಬಿಜೆಪಿ ಮುಖಂರಿಗೆ ಮಂಗಳಾರತಿಯಾದಂತಾಗಿದೆ ಎಂದಯ ಅವರು ಟೀಕಿಸಿದರು. ಕೊಟ್ಟ ಮಾತಿನಂತೆ ರಾಜ್ಯದ ರೈತರ 53 ಸಾವಿರ ಕೋ. ರೂ. ಸಾಲಮನ್ನಾ ಮಾಡಲು ತಾನು ಬದ್ಧನಾಗಿದ್ದೇನೆ.
ಒಂದು ವಾರ ಕಲಾವಕಾಶ ನೀಡಿ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿಯವರೇ ಕೇಳಿಕೊಂಡಿದ್ದರು. ಆದರೆ ಬಿಜೆಪಿಯವರು ಇದಕ್ಕೆ ಅವಕಾಶ ನೀಡದೇ ದಢೀರಾಗಿ ರಾಜ್ಯ ಬಂದ್‌ಗೆ ಕೆರೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರು. ಆದರೆ ಜನತೆ ಎಚ್ಚೆತ್ತುಕೊಂಡು ಬಿಜೆಪಿ ಅವರ ಹುನ್ನಾರವನ್ನು ವಿಫಲಗೊಳಿಸಿದರು ಎಂದ ಅವರು, ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಮತ್ತು ಯಡಿಯೂರಪ್ಪ ಬಂದ್‌ಗೆ ಕರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಧಮನಕ್ಕೆ ಮುಂದಾಗಿದ್ದಾರೆ. ವಾರದ ಗಡುವು ನೀಡುವಂತೆ ಮುಖ್ಯಮಂತ್ರಿ ಎಚ್ಡಿಕೆ ಕೇಳಿಕೊಂಡರು ಬಿಜೆಪಿ ಮುಖಂಡರು ಹಿಟ್ಲರ್‌ಗಳಂತೆ ರಾಜ್ಯ ಬಂದ್‌ಗೆ ಕರೆ ನೀಡಿದರು, ಆದರೆ ಬಂದ್‌ಗೆ ಸಾರ್ವಜನಿಕರು ಸ್ಪಂದಿಸದೇ ವಿಫಲಗೊಳಿಸಿದರೆಂದು ದೇವರಾಜ್ ಹೇಳಿದರು.
ದೇಶದಲ್ಲಿ ದಿನನಿತ್ಯ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಗೃಹಪಯೋಗಿ ವಸ್ತುಗಳ ಬೆಲೆಯನ್ನು ಕೇ ಸರಕಾರ ಏರಿಕೆ ಮಾಡುತ್ತಿದೆ. ಪರಿಣಾಮ ಸಮಾನ್ಯ ಜನರ ಬದುಕು ಕಷ್ಟಕರವಾಗುತ್ತಿದೆ. ಇದಕ್ಕೆಲ್ಲ ಯಾರು ಹೊಣೆ?, ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿ ಸರಕಾರದಿಂದ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದನ್ನು ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಅವರು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಏನೆಲ್ಲಾ ಭರವಸೆ ನೀಡಿದ್ದರೆಂಬುದು ಇಡೀ ದೇಶಕ್ಕೆ ತಿಳಿದಿದೆ. ಪ್ರಧಾನಿ ಮೋದಿ ಕೊಟ್ಟ ಭರವಸೆಗಳ ಪೈಕಿ ಯಾವುದನ್ನು ಈಡೇರಿಸಿದ್ದಾರೆಂದು ಬಿಜೆಪಿಯವರೇ ಹೇಳಲಿ?. ಪ್ರಧಾನಿಯ ಭರವಸೆ ಈಡೇರಿಸುತ್ತಾರೆಂದು ನಾವು ಕಳೆದ ನಾಲ್ದಕು ವರ್ಷ ಕಾದಿದ್ದೇವೆ. ಆದರೆ ರಾಜ್ಯದಲ್ಲಿ ಸಾಲ ಮನ್ನಾ ಮಾಡುತ್ತೇನೆ, ಒಂದು ವಾರ ಕಾಲಾವಕಾಶ ಕೊಡಿ ಎಂದು ಸಿಎಂ ಕುಮಾರಸ್ವಾಮಿ ಅವರು ಕೇಳುತ್ತಿದ್ದರೂ ಬಿಜೆಪಿಯವರಿಗೆ ಕಾಯಲು ಸಾಧ್ಯವಾಗುತ್ತಿಲ್ಲ. ಇದರಲ್ಲಿ ರಾಜಕೀಯವಲ್ಲದೇ ಮತ್ತೇನೂ ಇಲ್ಲ ಎಂದು ದೇವರಾಜ್ ಹರಿಹಾಯ್ದರು.
ಅಧಿಕಾರಕ್ಕೆ ಬಂದು ಒಂದೇ ದಿನದಲ್ಲಿ ರೈತರ ಸಾಲಮನ್ನಾ ಮಾಡುವಂತೆ ರಾಜ್ಯ ಬಂದ್ ಮಾಡಿರುವ ಇತಿಹಾಸವಿಲ್ಲ. ಯಡಿಯೂರಪ್ಪ ಅವರು 54 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ರೈತರ ಸಾಲಮನ್ನಾ ಮಾಡಬಹುದಿತ್ತಲ್ಲ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿರುವ ನೀರಾವರಿ ಸಮಸ್ಯೆಗಳ ಬಗ್ಗೆ ರೈತರ ಪರ ಧ್ವನಿ ಎತ್ತದ ಬಿಜೆಪಿಯವರಿಗೆ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಾಲಮನ್ನಾ ಮಾಡಬೇಕೆಂದು ಹೇಳಲು ಯಾವ ನೈತಿಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಿಂದ 17 ಬಿಜೆಪಿ ಸಂಸದರನ್ನು ಜನತೆ ಆರಿಸಿ ಸಂಸತ್‌ಗೆ ಕಳಿಸಿದ್ದಾರೆ. ಅವರೆಲ್ಲ ಈಗ ನಾಪತ್ತೆಯಾಗಿದ್ದು, ರಾಜ್ಯದ ಸಮಸ್ಯೆಗಳಾದ ಮಹದಾಯಿ ಯೋಜನೆ, ಕಳಸ ಬಂಡೂರಿ ಯೋಜನೆ, ಕಾಫಿ, ಕಾಳು ಮೆಣಸು ಧಾರಣೆ ಕುಸಿತ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು, ರಾಜ್ಯದ ರೈತರ 53 ಸಾವಿರ ಕೋ. ರೂ. ಸಾಲವನ್ನು ಸಿಎಂ ಎಚ್ಡಿಕೆ ನೇತರತ್ವದ ಮೈತ್ರಿ ಸರಕಾರ ಮನ್ನಾ ಮಾಡಿಯೇ ತೀರುತ್ತದೆ. ಇದಕ್ಕೆ ಬಿಜೆಪಿ ಮುಖಂಡರ ಅಪ್ಪಣೆ ಬೇಕಾಗಿಲ್ಲ. ಸರಕಾರ ಅವರು ಕೇಳುತ್ತಿದ್ದಾರೆಂಬುದಕ್ಕೆ ಸಾಲ ಮನ್ನಾ ಮಾಡುತ್ತಿಲ್ಲ. ಎಚ್ಡಿಕೆ ರೈತರಿಗೆ ನೀಡಿದ ಭರವಸೆಯಂತೆ ಎಲ್ಲ ರೈತರ ಸಾಲ ಮನ್ನಾ ಆಗಲಿದೆ ಎಂದು ಇದೇ ವೇಳೆ ದೇವರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪಗೌಡ, ರಮೇಶ್, ಹೊಲಗದ್ದೆ ಗಿರೀಶ್, ಭೈರೇಗೌಡ, ಜಯರಾಮ್ ಅರಸ್, ದೇವಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಭವಿಷ್ಯವಿಲ್ಲ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವರಾಜ್, ಜಿಲ್ಲೆಯ ಒಂದೇ ಒಂದು ಸಮಸ್ಯೆಯ ಬಗ್ಗೆ ಮಾತನಾಡದ ಶೋಭಾ ಕರಂದ್ಲಾಜೆಗೆ ಮೈತ್ರಿ ಸರಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆಗೆ ಜನ ಸಮಾನ್ಯರ ಬಗ್ಗೆ ಕಾಳಜಿಯಿಲ್ಲ. ಸಂಸದರಾದವರು ಹೇಗೆ ಅಧಿಕಾರ ಚಲಾಯಿಸಬೇಕೆಂದು ಅವರು ಮೊದಲು ಪಾಠ ಕಲಿತು ಬರಲಿ, ನಂತರ ಸರಕಾರದ ಭವಿಷ್ಯದ ಬಗ್ಗೆ ಮಾತನಾಡಲಿ. ಸಂಸದೆಯಾದ ಬಳಿಕ ನಾಪತ್ತೆಯಾಗಿದ್ದ ಅವರು ಎಲ್ಲಿ ಹೋದರೆಂದು ಕ್ಷೇತ್ರದ ಜನತೆ ದುರ್ಬೀನು ಹಾಕಿ ಹುಡುಕಬೇಕಾಗಿತ್ತು. ಸಂಸದೆಯಾಗಿ ಜಿಲ್ಲೆಗೆ ಯಾವ ಯೋಜನೆಯನ್ನೂ ತಾರದ ಅವರು ಈಗ ರಾಜಕೀಯ ಮಾಡಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಿ.ಟಿ.ರವಿಗೆ ಸಂಕಷ್ಟ..!
ಚಿಕ್ಕಮಗಳೂರು ನಗರದಲ್ಲಿನ ಎಂಜಿ ರಸ್ತೆ, ಐಜಿ ರಸ್ತೆಯನ್ನು ಕಳಪೆಯಾಗಿ ನಿರ್ಮಿಸಲಾಗಿದೆ. ಈ ಕಾಮಗಾರಿಗೆ ಬಂದ ಅನುದಾನ ದುರ್ಬಳಕೆಯಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಲು ಜೂನ್ 16ಕ್ಕೆ ನಗರಕ್ಕೆ ಬರಲಿದ್ದಾರೆ. ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರ ಹಗರಣಗಳು ಒಂದೊಂದಾಗಿ ಬಯಲಿಗೆಳೆಯಲಿದ್ದೇವೆ. ನಗರದ ಯುಜಿಡಿ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ.
- ಝಮೀರ್ ಅಹ್ಮದ್, ಜೆಡಿಎಸ್ ಮುಖಂಡ
ಮಾಜಿ ಸಿಎಂ ಯಡಿಯೂರಪ್ಪ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಹಣ ನೀಡಿ ನೆರವಾಗಿರುವ ಬಗ್ಗೆ ಯಾರದರು ಒಬ್ಬರು ಸಾಕ್ಷಿ ನೀಡಿದರೆ ಅವರ ಕಾಲ ಮುಟ್ಟಿ ನಮಸ್ಕರಿಸುತ್ತೇನೆ. ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು. ರೈತರ ಬಗ್ಗೆ ಅವರ ಮಾತೆಲ್ಲ ಬೊಗಳೆ. ಆದರೆ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.







