ಅಹವಾಲು ನೀಡಲು ಬಂದವರಿಗೆ ಮಜ್ಜಿಗೆ, ಬಿಸ್ಕೆಟ್: ಯುವತಿಯ ವಿದ್ಯಾಭ್ಯಾಸದ ಖರ್ಚು ಭರಿಸುವ ಭರವಸೆ ನೀಡಿದ ಸಿಎಂ
ಮುಖ್ಯಮಂತ್ರಿಯ ಮೊದಲ ಜನತಾದರ್ಶನದ ಹೈಲೈಟ್ಸ್

ಬೆಂಗಳೂರು, ಮೇ 29: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಇದೇ ವೇಳೆ, ಅನೇಕರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಮಂಗಳವಾರ ಬೆಳಗ್ಗೆಯಿಂದಲೇ ಕುಮಾರಕೃಪಾದಲ್ಲಿರುವ ಕೃಷ್ಣಾ ಬಳಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು, ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ, ಸಹಾಯ ಮಾಡಿ ಎಂದು ಮನವಿ ಪತ್ರ ಕೈಯಲ್ಲಿ ಹಿಡಿದು ಮುಖ್ಯಮಂತ್ರಿ ಬಳಿ ಕೋರಿದರು.
ಜನತಾ ದರ್ಶನದಲ್ಲಿ ಹಿರಿಯ ನಾಗರಿಕರು ನಿವೇಶನ, ಮಾಸಾಶನ, ಉದ್ಯೋಗಕ್ಕಾಗಿ ಮನವಿ ಸಲ್ಲಿಸಿದರೆ, ಯುವಕರು ಉದ್ಯೋಗ, ಸಾಲ ನೀಡುವಂತೆ ಕೋರಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಜನತಾ ದರ್ಶನದಲ್ಲಿ ಪರಿಹಾರ ಕಂಡು ಕೊಂಡವರು ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ರಾಜಾಜಿನಗರದ ಎಂ.ಗಂಗಪ್ಪ ಎಂಬುವವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಮಗೆ ನೆರವು ನೀಡಬೇಕೆಂದು 2010 ರಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಇದುವರೆಗೆ ಯಾವುದೆ ಸ್ಪಂದನ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ತಮ್ಮ ಪುತ್ರಿ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯನ್ನು ನಾನೇ ಸಾಕಬೇಕಿದೆ. ಜೊತೆಗೆ ಬಾಡಿಗೆ ಮನೆಯಲ್ಲಿದ್ದು, ಅದನ್ನು ಭರಿಸುವುದು ಸಹ ಕಷ್ಟವಾಗಿದೆ ಎಂದು ಗಂಗಪ್ಪ ಹಾಗೂ ಅವರ ಪತ್ನಿ ತಮಗೆ ಸಹಾಯ ಮಾಡಬೇಕೆಂದು ಬೇಡಿಕೊಂಡರು.
ಅದೇ ರೀತಿ, ಗ್ರಾಮ ಸಹಾಯಕ ಹುದ್ದೆ ಪರೀಕ್ಷೆ ಬರೆದು, ಕೆಲಸಕ್ಕೆ ಆಯ್ಕೆಯಾಗಿಯೂ ಕಡೆ ಹಂತದಲ್ಲಿ ನೌಕರಿಯಿಂದ ವಂಚಿತರಾಗಿದ್ದ ಚನ್ನಪಟ್ಟಣದ ಸಂಗೀತಾ ಎಂಬುವವರು ನೌಕರಿ ವಿಚಾರವಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೂಡಲೇ ರಾಮನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ ಕುಮಾರಸ್ವಾಮಿ ಮಾಹಿತಿ ಪಡೆದರು. 18 ವರ್ಷ ತುಂಬದ ಕಾರಣಕ್ಕೆ ಕೆಲಸಕ್ಕೆ ಆಯ್ಕೆಯಾಗಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಮುಖ್ಯಮಂತ್ರಿಗೆ ತಿಳಿಸಿದರು. ನಂತರ ಸಂಗೀತಾ ಪಾಲಕರೊಂದಿಗೆ ಮಾತನಾಡಿ ವಿದ್ಯಾಭ್ಯಾಸ ಮುಂದುವರೆಸಿ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ನುಡಿದರು.
ಮಾಸಾಶನ ಹೆಚ್ಚಳ, ನಿವೇಶನ ಸೌಲಭ್ಯ, ರಿಯಾಯಿತಿ ಬಸ್ ಪಾಸ್ ನೀಡುವಂತೆ ವಿಜಯಪುರದಿಂದ ಬಂದಿದ್ದ ಹಿರಿಯ ನಾಗರಿಕರು ಮನವಿ ಸಲ್ಲಿಸಿದರು. ಕುಣಿಗಲ್ ಮೂಲದ ಗೋವಿಂದಪ್ಪ ಎಂಬುವವರು ತಮಗೊಂದು ನಿವೇಶನ ಒದಗಿಸುವಂತೆ ಕೋರಿದರು.
ಉಡುಗೊರೆ, ಅಭಿನಂದನೆ
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನತಾದರ್ಶನದ ಮೂಲಕ ಉದ್ಯೋಗ ಪಡೆದಿದ್ದ ಸರಿತಾ ಎಂಬ ಮಹಿಳೆ ಮಂಗಳವಾರ ಜನತಾ ದರ್ಶನಕ್ಕೆ ಆಗಮಿಸಿ ಮುಖ್ಯಮಂತ್ರಿಗೆ ಗಣೇಶನ ಮೂರ್ತಿಯ ಉಡುಗೊರೆ ನೀಡಿದರು. ಇದೆಲ್ಲದರ, ನಡುವೆ ಹಲವರು ಕಚೇರಿ ಕೃಷ್ಣಾ ಬಳಿ ಆಗಮಿಸಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶುಭ ಕೋರಿದರು
ಅತಿಥಿ ಸತ್ಕಾರ
ಜನತಾ ದರ್ಶನಕ್ಕೆ ಅಹವಾಲು ಹಿಡಿದು ಬರುವ ನಾಗರಿಕರನ್ನು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಅತಿಥಿಗಳಂತೆ ಸತ್ಕರಿಸಲಾಯಿತು. ಮಜ್ಜಿಗೆ, ಬಿಸ್ಕೆಟ್ ನೀಡಿ ಸಾರ್ವಜನಿಕರನ್ನು ಅಧಿಕಾರಿಗಳು ಉಪಚರಿಸಿದರು.







