ಜಿಲ್ಲಾ ಪತ್ರಕರ್ತರ ಸಂಘದಿಂದ ಕೇಶವ ವಿಟ್ಲರಿಗೆ ಶ್ರದ್ಧಾಂಜಲಿ

ಹಾಸನ, ಮೇ. 29: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಿಧನರಾದ ಹಿನ್ನಲೆಯಲ್ಲಿ ಮಂಗಳವಾರ ಮದ್ಯಾಹ್ನ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರಾದ ಇವರು 'ಮುಂಗಾರು' ಪತ್ರಿಕೆ ಮೂಲಕ ಪತ್ರಿಕಾ ಛಾಯಾಗ್ರಹಣ ಆರಂಭಿಸಿದ್ದರು. ಕ್ಯಾಮೆರಾ ಕಣ್ಣಿನಿಂದ ಹೊಸ ಲೋಕ ತೋರಿಸಿಕೊಟ್ಟಿದ್ದ ಕೇಶವ ವಿಟ್ಲ ತಮ್ಮ ಕೃತಿಯ ಮೂಲಕ ಕರ್ನಾಟಕದ ಹೊಸ ಒಳನೋಟಗಳನ್ನು ಸೆರೆಹಿಡಿದಿದ್ದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಸಂಪುಟವನ್ನು ಪ್ರಕಟಿಸಿತ್ತು. ಗ್ರಾಮೀಣ ಪ್ರದೇಶವಾದ ವಿಟ್ಲದಲ್ಲಿ 1961ರಲ್ಲಿ ಜನಿಸಿದ ಕೇಶವ ವಿಟ್ಲ ಅವರು, 1984 ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಛಾಯಾಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದರು. ಅನಂತರ 1996 ರಿಂದ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಬಳಗದಲ್ಲಿ ಹಲವು ವರ್ಷಗಳ ಕಾಲ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿ, ತದನಂತರ ಫ್ರೀಲಾನ್ಸ್ ಪತ್ರಿಕಾ ಛಾಯಗ್ರಾಹಕರಾಗಿ ದಿ ಟೆಲಿಗ್ರಾಫ್, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ಒದಗಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್‍ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಲಿಯೇಂದ್ರ ಪುರಸ್ಕಾರ, ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದವರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು, ಉಪಾಧ್ಯಕ್ಷ ಅತೀಖುರ್ ರೆಹಮನ್, ಖಜಾಂಚಿ ಪ್ರಕಾಶ್, ಎಸ್.ಆರ್. ಪ್ರಸನ್ನಕುಮಾರ್ ಇತರರು ಪಾಲ್ಗೊಂಡಿದ್ದರು.







