ಬಂಟ್ವಾಳ: ಭಾರೀ ಮಳೆಗೆ ಮುಳುಗಿದ ತಗ್ಗು ಪ್ರದೇಶ, ಅಪಾರ ಹಾನಿ

ಬಂಟ್ವಾಳ, ಮೇ 29: ವಾಯುಭಾರ ಕುಸಿತದಿಂದ ವಿಟ್ಲ ಸಹಿತ ಬಂಟ್ವಾಳ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಶೇಖರಣೆಗೊಂಡು ಜನರು ತೊಂದರೆ ಅನುಭವಿಸಿದರು.
ಬಿ.ಸಿ.ರೋಡ್ ಮೇಲ್ಸೆತುವೆ ಕೆಳಭಾಗ, ಪಾಣೆಮಂಗಳೂರು, ಬಂಟ್ವಾಳ ಪೇಟೆ ಸಹಿತ ಹಲವೆಡೆ ಚರಂಡಿಗಳು ಹೂಳೆತ್ತದ ಕಾರಣ ರಸ್ತೆಯಲ್ಲೇ ನೀರು ಹರಿದು ಮುಖ್ಯ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿದ್ದು, ಪಾದಚಾರಿಗಳು, ವಾಹನ ಸವಾರರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾದರು.
ಮಂಗಳೂರಿನ ಹಲವೆಡೆ ಕೃತಕ ನೆರೆಯಿಂದಾಗಿ ರಸ್ತೆ ಸಂಚಾರದಲ್ಲಿ ತೊಡಕುಂಟಾಗಿದ್ದು, ವಾಹನಗಳು ಮೆಲ್ಕಾರ್ ಮಾರ್ಗವಾಗಿ ಸಂಚರಿಸಿದವು.
ಸರ್ವೀಸ್ ರಸ್ತೆ ಕೆಲವು ಕಡೆ ಎತ್ತರ, ಕೆಲವೆಡೆ ತಗ್ಗು, ಕೆಲವೆಡೆ ನೀರು ಹರಿದು ಹೋಗಲು ಜಾಗ ಇಲ್ಲದ ಕಾರಣ ಸಮಸ್ಯೆ ಉಂಟಾಯಿತು. ಬಿ.ಸಿ.ರೋಡ್‌ನ ಮಂಗಳೂರು ಬಸ್ ನಿಲ್ಲುವ ಜಾಗದಲ್ಲಿ ನೀರು ತುಂಬಿ ನಿಂತರೆ, ಅದರ ಹಿಂದೆ ತಾಪಂ ಕಟ್ಟಡ ಕೆಡಹಿದ ಕಾರಣ ಅಲ್ಲಿಂದ ಮಣ್ಣು ಕರಗಿ ರಸ್ತೆಗೆ ಬರುತ್ತಿದೆ. ಫ್ಲೈಓವರ್ ಅಡಿಯಲ್ಲಿ ನೀರು ನಿಂತರೆ, ಫ್ಲೈಓವರ್ ಮೇಲಿನಿಂದ ವಾಹನ ಸಂಚರಿಸುವಾಗಲೆಲ್ಲ ನೀರು ಕೆಳಗೆ ಚಿಮ್ಮುತ್ತಿರುವ ದೃಶ್ಯ ಕಂಡುಬಂತು. ಕೈಕಂಬ, ಪೊಳಲಿ ದ್ವಾರದ ಸಮೀಪ ಸಹಿತ ರಾಷ್ಟ್ರೀಯ ಹೆದ್ದಾರಿಯ ನಟ್ಟನಡುವೆ ನೀರು ನಿಂತು ವಾಹನ ಸವಾರರು ಗೊಂದಲಕ್ಕೊಳಗಾದರು.
ಮಳೆಯಿಂದ ಹಾನಿ: ಕರಿಯಂಗಳ ಗ್ರಾಮದ ಕಿನ್ನಿಗುಡ್ಡೆ ಎಂಬಲ್ಲಿ ಹೊನ್ನಯ್ಯ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸುಮಾರು 10 ಸಾವಿರ ರೂ. ನಷ್ಟವಾಗಿದೆಂದು ಅಂದಾಜಿಸಲಾಗಿದೆ.
ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಬ್ದುಲ್ ಲತೀಫ್ ಎಂಬವರಿಗೆ ಸೇರಿದ ಮನೆಗೆ ಹತ್ತಿರದ ಮನೆಯ ಅವಾರಣ ಗೊಡೆ ಬಿದ್ದ ಪರಿಣಾಮ ಮನೆ ಗೋಡೆ ಬಿರುಕು ಬಿಟ್ಟಿದ್ದು, ಹಾನಿಯಾಗಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕರಿ ಶಿವಾನಂದ ನಾಟೇಕಾರ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕರಿ ಪ್ರಶಾಂತ್, ಸಿಬ್ಬಂದಿ ಸದಾಶಿವ ಕೈಕಂಬ, ಅಶೋಕ್, ಶೀತಲ್, ಚಂದ್ರಶೇಖರ್, ರೂಪೇಶ್ ಕರಿಯಂಗಳ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.







