ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ: ಕೊನೆಗೂ ಪ್ರತಿಕ್ರಿಯಿಸಿದ ಕಾಂಗ್ರೆಸ್

ಹೊಸದಿಲ್ಲಿ, ಮೇ 29: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಒಪ್ಪಿಕೊಂಡಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯ ನಿರ್ಧಾರದ ಬಗ್ಗೆ ಯಾವುದೇ ಹೇಳಿಕೆ ನೀಡಲು ಕಾಂಗ್ರೆಸ್ ನಿರಾಕರಿಸಿದ್ದು, ಈ ವಿಷಯದ ಬಗ್ಗೆ ಮುಖರ್ಜಿಯವರಲ್ಲೇ ಕೇಳುವಂತೆ ತಿಳಿಸಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಜೂನ್ 7ರಂದು ನಡೆಯಲಿರುವ ಆರೆಸ್ಸೆಸ್ ನ ಸ್ವಯಂಸೇವಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಕಾಂಗ್ರೆಸ್ ಧುರೀಣ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರೆಸ್ಸೆಸ್ ಪ್ರಮುಖರು ತಿಳಿಸಿದ್ದಾರೆ. “ಮುಖರ್ಜಿ ನಿರ್ಧಾರದ ಕುರಿತು ನಮಗೆ ಏನೂ ಹೇಳಲಿಕ್ಕಿಲ್ಲ. ಅದೇನಿದ್ದರೂ ಅವರನ್ನೇ ಕೇಳಿ. ನಾವು ಹೇಳುವುದಿಷ್ಟೇ, ಅವರ ಮತ್ತು ನಮ್ಮ ಸಿದ್ಧಾಂತದಲ್ಲಿ ಬಹಳ ವ್ಯತ್ಯಾಸವಿದೆ” ಎಂದು ಕಾಂಗ್ರೆಸ್ ವಕ್ತಾರ ಟೊಮ್ ವಡಕ್ಕನ್ ತಿಳಿಸಿದ್ದಾರೆ. ಆರೆಸ್ಸೆಸ್ ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಗುರುವಾಗಿದೆ. ಸಂಘ ಪರಿವಾರವು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ರಿಮೋಟ್ ಕಂಟ್ರೋಲ್ ಮೂಲಕ ಸರಕಾರವನ್ನು ನಡೆಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪದೇಪದೆ ಆರೋಪಿಸುತ್ತಿರುತ್ತಾರೆ. 82ರ ಹರೆಯದ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಸಂಘ ಪರಿವಾರದ ಆಹ್ವಾನವನ್ನು ಸ್ವೀಕರಿಸಿರುವುದು ಒಂದು ಗಮನಾರ್ಹ ಬೆಳವಣಿಗೆ ಎಂದು ಆರೆಸ್ಸೆಸ್ ತಿಳಿಸಿದೆ. ಆರೆಸ್ಸೆಸ್ ಆಹ್ವಾನವನ್ನು ಮುಖರ್ಜಿ ಸ್ವೀಕರಿಸಿರುವುದು ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಯಬೇಕು ಮತ್ತು ಭಿನ್ನಾಭಿಪ್ರಾಯವಿರುವವರು ಶತ್ರುಗಳಲ್ಲ ಎಂಬುದನ್ನು ದೇಶಕ್ಕೆ ತೋರಿಸಿದೆ. ಸಂಘ ಪರಿವಾರದ ಮತ್ತು ಹಿಂದುತ್ವದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಸಂಘ ಪರಿವಾರದ ನಾಯಕ ರಾಕೇಶ್ ಸಿನ್ಹಾ ತಿಳಿಸಿದ್ದಾರೆ. ಪ್ರಣಬ್ ಮುಖರ್ಜಿ ಈ ಹಿಂದೆ ಆರೆಸ್ಸೆಸ್ ಅನ್ನು ರಾಷ್ಟ್ರವಿರೋಧಿ, ಅನೈತಿಕ, ವಂಚಕ ಮತ್ತು ಸಂಚುಕೋರ ಎಂದೆಲ್ಲಾ ಕರೆದಿದ್ದಾರೆ. ಸಂಘದ ಬಗ್ಗೆ ಮುಖರ್ಜಿಯವರ ಅಭಿಪ್ರಾಯವೇನು ಎಂಬುದು ಅದಕ್ಕೆ ತಿಳಿದಿರಬೇಕು. ಅಂಥವರನ್ನೇ ಸಂಘ ಪರಿವಾರದ ನಾಯಕರು ಆಹ್ವಾನಿಸಿದ್ದಾರೆ ಎಂದರೆ ಮುಖರ್ಜಿ ಮಾಡಿದ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ ಎಂದಾಯಿತು ಎಂದು ಕಾಂಗ್ರೆಸ್ ವಕ್ತಾರ ತಿಳಿಸಿದ್ದಾರೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೂಡಾ ಸಂಘ ಪರಿವಾರದ ಸಭೆಯಲ್ಲಿ ಭಾಗವಹಿಸಿದ್ದರು. ಅಂದು ಅವರು ಸಂಘದ ಪ್ರಥಮ ಮುಖ್ಯಸ್ಥ ಡಾ. ಕೆ.ಬಿ ಹೆಡ್ಗೆವಾರ್ ಅವರೊಂದಿಗೆ ಭಾರತದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ತಿಳಿಸಿದೆ.





