ಮಂಗಳೂರಿನ ಸ್ಥಿತಿಗೆ ಪಾಲಿಕೆಯ ನಿರ್ಲಕ್ಷ್ಯ ಕಾರಣ: ಮುನೀರ್ ಆರೋಪ

ಮಂಗಳೂರು, ಮೇ 29: ಮಂಗಳೂರಿನ ಇಂದಿನ ದಯನೀಯ ಸ್ಥಿತಿಗೆ ಪಾಲಿಕೆಯ ನಿರ್ಲಕ್ಷ್ಯ ಕಾರಣ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮುಂಗಾರು ಮಳೆ ಆರಂಭಗೊಂಡ ಗಂಟೆಯೊಳಗಡೆ ಮಂಗಳೂರಿನಲ್ಲಿ ಪ್ರವಾಹ ಬಂದು ನೂರಾರು ಮನೆಗಳು ಮುಳುಗಿರುವುದು, ರಸ್ತೆಗಳು ಜಲಾವೃತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿರುವುದು ಆತಂಕದ ಸಂಗತಿ. ನೀರು ಹರಿಯುವ ಕಾಲುವೆ, ತೋಡುಗಳ ಅತಿಕ್ರಮಣ, ರಸ್ತೆ, ಲೇಔಟ್, ಕಟ್ಟಡಗಳ ನಿರ್ಮಾಣ ಸಹಿತ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದ ದೂರದೃಷ್ಟಿಯ ಕೊರತೆ, ಮಳೆಗಾಲವನ್ನು ಎದುರಿಸುವ ಸಿದ್ಧತೆಯನ್ನು ನಗರ ಪಾಲಿಕೆ ಕೇವಲ ಮಾತಿಗಷ್ಟೆ ಸೀಮಿತಗೊಳಿಸಿರುವುದು ಮಂಗಳೂರಿನ ಇಂದಿನ ದಯನೀಯ ಸ್ಥಿತಿಗೆ ಕಾರಣ ಎಂದವರು ಆರೋಪ ಮಾಡಿದ್ದಾರೆ.
ಜಿಲ್ಲಾಡಳಿತ ಈಗಲಾದರೂ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡು ಜನತೆಯನ್ನು ರಕ್ಷಿಸಬೇಕು, ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಬೇಕು, ಸಂತ್ರಸ್ತ ನಾಗರಿಕರಿಗೆ ನಷ್ಟ ಪರಿಹಾರವನ್ನು ಒದಗಿಸಬೇಕು, ಮಂಗಳೂರಿನಲ್ಲಿ ಉಂಟಾಗಿರುವ ಗಂಭೀರ ಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸರಕಾರ ತುರ್ತು ಪರಿಹಾರಕ್ಕಾಗಿ ತನ್ನ ವಿಶೇಷ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡಬೇಕು ಹಾಗೂ ಹಣಕಾಸಿನ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೆದ್ದಾರಿ ಅಭಿವೃದ್ಧಿಯ ಸಂದರ್ಭ ನಡೆಸಿದ ಅವೈಜ್ಞಾನಿಕವಾಗಿ ಕಾಮಗಾರಿ, ನಗರದ ಹೊರವಲಯದ ಕೃಷಿಭೂಮಿ, ನೀರು ನಿಲ್ಲುವ ತಗ್ಗು ಪ್ರದೇಶದ ಮೈದಾನಗಳು, ರಾಜಾಕಾಲುವೆ, ತೋಡುಗಳನ್ನು ರಿಯಲ್ ಎಸ್ಟೇಟ್ ಲಾಬಿಗಳು ಬೇಕಾಬಿಟ್ಟಿ ಮಣ್ಣುತುಂಬಿ ಲೇಔಟ್‌ಗಳನ್ನಾಗಿ ಪರಿವರ್ತಿಸಿರುವುದು, ವಸತಿ ಸಂಕೀರ್ಣ ನಿರ್ಮಿಸಿರುವುದು ಒಂದು ಜಡಿಮಳೆಗೆ ಮಂಗಳೂರು ತತ್ತರಗೊಳ್ಳಲು ಕಾರಣ. ರಸ್ತೆಗಳನ್ನು ಮುಖ್ಯವಾಗಿ ಲೇಔಟ್, ಮನೆ ನಿವೇಶನಗಳನ್ನು ಸಿದ್ಧಪಡಿಸುವಾಗ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳು ನಿರ್ಮಾಣಗೊಳ್ಳುವಂತೆ ಪಾಲಿಕೆ ಖಾತರಿಪಡಿಸಿದ್ದರೆ, ತೋಡು - ರಾಜಾಕಾಲುವೆಗಳು ಅತಿಕ್ರಮಣಗೊಳ್ಳುವುದನ್ನು ತಡೆದಿದ್ದರೆ ಇಂದು ಇಂತಹ ಸ್ಥಿತಿ ಉದ್ಭವಗೊಳ್ಳುತ್ತಿರಲಿಲ್ಲ. ಈ ಕುರಿತು ಹಿಂದೆ ಡಿವೈಎಫ್ ಐ ಸಹಿತ ನಾಗರಿಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಹಲವು ದೂರುಗಳನ್ನು ಸಲ್ಲಿಸಿದ್ದವು. ಆದರೆ ಭೂ ಮಾಫಿಯಾ, ರಿಯಲ್ ಎಸ್ಟೇಟ್ ಲಾಬಿಗಳೊಂದಿಗೆ ಶಾಮೀಲಾದ ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲಾ ಅಕ್ರಮಗಳನ್ನು ತಪ್ಪಾದ ದಾರಿಯಲ್ಲಿ ಮುಚ್ಚಿಹಾಕಿದ್ದರು. ಕೊಟ್ಟಾರ ಚೌಕಿ ಭಾಗದಲ್ಲಿ ಇಂತಹ ಬಹುದೊಡ್ಡ ಅಕ್ರಮದ ವಿರುದ್ಧ ಹಲವು ಬಾರಿ ಧ್ವನಿ ಎತ್ತಿದ್ದರೂ ನಮ್ಮ ದೂರುಗಳನ್ನ ಕಡೆಗಣಿಸಲಾಗಿತ್ತು. ಇಂದು ಅದೇ ಪ್ರದೇಶದಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದೆ. ಇಂತಹ ಅಕ್ರಮಗಳ ಕುರಿತು ಸರಕಾರ ನ್ಯಾಯಯುತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ಭವಿಷ್ಯದಲ್ಲಿ ಇಂತಹ ತಪ್ಪುಗಳು ಆಗದಂತೆ ನಿಗಾವಹಿಸಬೇಕು ಮುನೀರ್ ಒತ್ತಾಯಿಸಿದ್ದಾರೆ.







