ಭಗವಾಧ್ವಜ ವಿವಾದ: ಯುವಕರಿಬ್ಬರ ಮೇಲೆ ಹಲ್ಲೆ; ಆರೋಪ
ಆರು ಮಂದಿಯ ಬಂಧನ, ಬಿಡುಗಡೆ

ಕೊಪ್ಪ, ಮೇ 29: ಭಗವಾಧ್ವಜ ಸ್ಥಾಪನೆ ವಿಚಾರದಲ್ಲಿ ಎಂಟು ತಿಂಗಳಿಂದ ನಡೆಯುತ್ತಿದ್ದ ಶೀತಲ ಸಮರ ಮಂಗಳವಾರ ವಿಕೋಪಕ್ಕೆ ತಿರುಗಿ ಇಬ್ಬರು ಯುವಕರ ಮೇಲೆ ಇನ್ನೊಂದು ಕೋಮಿನ ಯುವಕರ ಗುಂಪು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಸೋಮವಾರ ರಾತ್ರಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದ ಬಳಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಗಾಯಗೊಂಡ ಸಣ್ಣಕೆರೆಯ ಶ್ರೀಕಾಂತ್ ಮತ್ತು ಸುದರ್ಶನ್ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸಂಬಂಧ ಶ್ರೀಕಾಂತ್ ಕೊಪ್ಪ ಪೊಲೀಸರಿಗೆ ನೀಡಿದ ದೂರಿನಂತೆ ಸಣ್ಣಕೆರೆಯ ತಾಝಿಲ್(19), ರಹಮಾನ್(23), ಹನುಮಾನ್ ನಗರದ ರಿಝ್ವಾನ್(19) ನಿಸಾರ್(23), ರಝೀಂ(19), ಜಟ್‌ಪಟ್‌ನಗರದ ಅಬ್ಬು(22) ಎಂಬವರನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಮೇಲಿನಪೇಟೆಯ ರಿಯಾಝ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳನ್ನು ಮಂಗಳವಾರ ಸಂಜೆ ಕೊಪ್ಪ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸದ್ಯ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಘಟನೆಯ ಹಿನ್ನೆಲೆ: ಎಂಟು ತಿಂಗಳ ಹಿಂದೆ ಸಣ್ಣಕೆರೆಯ ಸರ್ಕಲ್ ಬಳಿ ಖಾಸಗಿ ಜಾಗದಲ್ಲಿ ಭಗವಾಧ್ವಜವನ್ನು ಅಳವಡಿಸಲಾಗಿತ್ತು. ಇದಕ್ಕೆ ಸ್ಥಳೀಯ ಮುಸ್ಲಿಂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಆ ಜಾಗದಲ್ಲಿ ಆರೆಸ್ಸೆಸ್ ಶಾಖೆ ನಡೆಸಲು ಪ್ರಾರಂಭಿಸಿದ್ದು, ಸ್ಥಳೀಯ ಹಿಂದೂ ಯುವಕರು ಶಾಖೆಗೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದ ಈ ಎರಡು ಸಮುದಾಯಗಳ ಯುವಕರ ಗುಂಪುಗಳ ಪೈಕಿ ಒಂದು ಗುಂಪು ಬಿಜೆಪಿಯನ್ನು ಮತ್ತೊಂದು ಗುಂಪು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿರುವುದು ಬಿಜೆಪಿಯನ್ನು ಬೆಂಬಲಿಸಿದ್ದ ಯುವಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಸೋಮವಾರ 9ರ ಹೊತ್ತಿಗೆ ಕ್ರೀಡಾಂಗಣದ ಬಳಿ ಇದ್ದ ಶ್ರೀಕಾಂತ್ ಮತ್ತು ಸುದರ್ಶನ್‌ರನ್ನು ಏಕಾಏಕಿ ಮುತ್ತಿಕೊಂಡ ಆರೋಪಿಗಳು ಧ್ವಜ ಹಾಕಿರುವ ಬಗ್ಗೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಶ್ರೀಕಾಂತ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಚುನಾವಣೆಯ ಸೋಲಿನಿಂದ ಹತಾಶೆಗೊಂಡಿರುವ ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲಿ ಆಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಲಾಗುವುದು. ರಸಋಷಿ ಕುವೆಂಪುರವರ ಕವಿವಾಣಿಯಂತೆ ಕ್ಷೇತ್ರವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸುವುದೇ ನನ್ನ ಧ್ಯೇಯ. ಸಣ್ಣ ಘಟನೆಯನ್ನು ದೊಡ್ಡದು ಮಾಡುವ ಹುನ್ನಾರಕ್ಕೆ ಬಿಜೆಪಿ, ಸಂಘಪರಿವಾರದ ಮುಖಂಡರು ಕೈಹಾಕಿದ್ದಾರೆ.
ಟಿ.ಡಿ. ರಾಜೇಗೌಡ, ಶಾಸಕ ಶೃಗೇರಿ







