ಭಾರೀ ಮಳೆ: ಉಡುಪಿ ನಗರ ಪ್ರದೇಶ ಜಲಾವೃತ

ಉಡುಪಿ, ಮೇ 29: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಇಂದು ನಗರದ ತಗ್ಗು ಪ್ರದೇಶಗಳು ಜಲಾವೃತ ಗೊಂಡಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ ಜಲಾವೃತಗೊಂಡಿದ್ದು, ಇದ ರಿಂದ ವಾಹನ ಪಾರ್ಕಿಂಗ್‌ಗೆ ಸಮಸ್ಯೆಯಾಗಿದೆ. ಕಲ್ಸಂಕ ತೋಡು ತುಂಬಿ ಹರಿ ಯುತ್ತಿದ್ದು, ಬೈಲಕೆರೆ ಪ್ರದೇಶಗಳ ಕೆಲವು ಮನೆಗಳ ಅಂಗಳಕ್ಕೆ ತೋಡಿನ ನೀರು ನುಗ್ಗಿದೆ. ಅದೇ ರೀತಿ ಕಲ್ಸಂಕ ತೋಡಿನ ನೀರು ಹರಿದುಹೋಗುವ ಮಠದ ಬೆಟ್ಟು, ನಿಟ್ಟೂರಿನ ತಗ್ಗುಪ್ರದೇಶಗಳು ಕೂಡ ಜಲಾವೃತಗೊಂಡಿರುವ ಬಗ್ಗೆ ವರದಿ ಯಾಗಿದೆ.
ಮಳೆಯಿಂದ ಕಲ್ಸಂಕ ತೋಡು ತುಂಬಿ ಹರಿಯುತ್ತಿರುವ ಪರಿಣಾಮ ಕಲ್ಸಂಕ ಜಂಕ್ಷನ್ ಬಳಿ ನಗರಸಭೆಯಿಂದ 75ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಸೇತುವೆ ಕಾಮಗಾರಿಗೆ ಅಡ್ಡಿ ಉಂಟಾಗಿದೆ. ಈಗಾಗಲೇ ವಿಳಂಬ ವಾಗಿರುವ ಈ ಕಾಮಗಾರಿ ಇದರಿಂದ ಮತ್ತಷ್ಟು ವಿಳಂಬವಾಗಿ ಮಳೆಗಾಲ ಮುಗಿದ ಬಳಿಕವಷ್ಟೆ ಆರಂಭಗೊಳ್ಳಲಿದೆ.
ಮಳೆಯ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿಯ ಮಣಿಪಾಲ- ಉಡುಪಿ ಮುಖ್ಯರಸ್ತೆ ನೀರಿನಿಂದ ಆವೃತಗೊಂಡಿತ್ತು. ಅಲ್ಲದೆ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಆವರಣದೊಳಗೆ ನೀರು ನುಗ್ಗಿತ್ತು.
ಬೀಡಿನಗುಡ್ಡೆಯಲ್ಲಿ ಕೃತಕ ನೆರೆ
76 ಬಡಗಬೆಟ್ಟು ಗ್ರಾಮದ ಬೀಡಿನಗುಡ್ಡೆಯಲ್ಲಿ ಕೃತಕ ನೆರೆ ಉಂಟಾಗಿ ಸುಮಾರು ಐದು ಮನೆಗಳು ಸಂಪೂರ್ಣ ಜಲಾವೃತಗೊಂಡಿರುವ ಬಗ್ಗೆ ವರದಿ ಯಾಗಿದೆ.
ಗದ್ದೆಯ ಮಧ್ಯೆ ಇರುವ ಈ ಮನೆಗಳಿಗೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ರಸ್ತೆಗಾಗಿ ಕಳೆದ 15 ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸುತ್ತಿದ್ದು, ಅದಕ್ಕಾಗಿ ಜಾಗವನ್ನು ಧರ್ಮಾರ್ಥವಾಗಿ ಬಿಟ್ಟು ಕೊಟ್ಟಿದ್ದರೂ ನಗರಸಭೆ ಈವರೆಗೆ ರಸ್ತೆ ನಿರ್ಮಿಸಲು ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪ.







