2019ಕ್ಕೆ ಪ್ರಧಾನಿ ಅಭ್ಯರ್ಥಿಯಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!
ಆದರೆ ಈ ಯೋಜನೆಯ ಹಿಂದಿರುವುದು ಕಾಂಗ್ರೆಸ್ ಅಲ್ಲ

#ಏನಿದು ಹೊಸ ಮಾಸ್ಟರ್ ಪ್ಲ್ಯಾನ್?, ಯಾರಿದರ ರೂವಾರಿ ?
ಹೊಸದಿಲ್ಲಿ, ಮೇ 29: ಮಾಜಿ ರಾಷ್ಟ್ರಪತಿ ಮತ್ತು ಪ್ರಧಾನಿಯಾಗಲು ಹಲವು ಬಾರಿ ವಿಫಲ ಯತ್ನ ನಡೆಸಿದ್ದ ಹಿರಿಯ ಕಾಂಗ್ರೆಸಿಗ ಪ್ರಣಬ್ ಮುಖರ್ಜಿ 2019ರ ಮಹಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ?... ಹೀಗೂ ಉಂಟೆ ಎಂದು ಹುಬ್ಬೇರಿಸಬೇಡಿ . ರಾಜಕೀಯದಲ್ಲಿ ಏನೂ ಆಗಬಹುದು. ಹಾಗಾಗಿ ರಾಷ್ಟ್ರಪತಿ ಆಗಿ ಮಾಜಿಯಾದ ಹಿರಿಯ ಪ್ರಣಬ್ ಮುಖರ್ಜಿ ನಿವೃತ್ತರು ಎಂದು ಹೆಚ್ಚಿನವರು ಭಾವಿಸಿದ್ದರೆ, ಅವರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಲು ಪ್ರಣಬ್ ಒಪ್ಪಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಈ ಸುದ್ದಿ ಹೊರಬಂದಿದೆ. ಎನ್ ಡಿ ಟಿವಿ ಪ್ರಕಾರ, ಮಾಜಿ ರಾಷ್ಟ್ರಪತಿ ಮುಖರ್ಜಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸೇತರ ತೃತೀಯ ರಂಗವೊಂದರ ರಚನೆಯ ಬಗ್ಗೆ ಸಕ್ರಿಯವಾಗಿ ರಂಗಕ್ಕಿಳಿದಿದ್ದಾರೆ . ಇದನ್ನು ಅವರ ಸಂಪರ್ಕದಲ್ಲಿರುವ ರಾಜಕೀಯ ಪಕ್ಷಗಳ ಮುಖಂಡರೇ ಖಚಿತಪಡಿಸಿದ್ದಾರೆ. ಹಲವರ ಹೇಳಿಕೆ ಪ್ರಕಾರ ಇದು ಇಷ್ಟಕ್ಕೇ ನಿಂತಿಲ್ಲ . ಎಲ್ಲ ಸರಿ ಹೋದರೆ, ಮುಖರ್ಜಿಯೇ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ವಿರುದ್ಧ ಕಣಕ್ಕಿಳಿದರೂ ಅಚ್ಚರಿಯಿಲ್ಲ!.
ಕಳೆದ ಜನವರಿಯಲ್ಲಿ ಭುಭನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ ಪಾಟ್ನಾಯಕ್ ಅವರ ನಿವಾಸದಲ್ಲಿ ನಡೆದ ಭೋಜನ ಕಾರ್ಯಕ್ರಮ ತೃತೀಯ ರಂಗ ರಚನೆಗೆ ಮುನ್ನುಡಿ ಬರೆದ ಸಭೆ ಎಂದು ಒಂದು ವರದಿಯಿದೆ. ತಮ್ಮ ತಂದೆ ದಿವಂಗತ ಬಿಜು ಪಾಟ್ನಾಯಕ್ ಅವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ನೆಪದಲ್ಲಿ ಪ್ರಣಬ್, ಅಡ್ವಾಣಿ, ದೇವೇಗೌಡ ಹಾಗು ಸೀತಾರಾಮ್ ಯೆಚೂರಿ ಅವರನ್ನು ನವೀನ ಪಾಟ್ನಾಯಕ್ ಆಮಂತ್ರಿಸಿದ್ದರು. ಆದರೆ ಅದಕ್ಕೂ ಮೊದಲೇ ಕಳೆದ ವರ್ಷ ರಾಷ್ಟ್ರಪತಿ ಭವನದಲ್ಲಿ ನವೀನ ಪಾಟ್ನಾಯಕ್ ಅವರು ಪ್ರಣಬ್ ಅವರನ್ನು ಭೇಟಿಯಾಗಿ ಅಲ್ಲಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಲಾಗಿದೆ.
ಮಮತಾ ಮತ್ತು ಪ್ರಣಬ್ ನಡುವೆ ಆತ್ಮೀಯತೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಮಮತಾ ರಾಜಕೀಯ ಜೀವನದಲ್ಲಿ ಅವರಿಗೆ ಪ್ರಣಬ್ ಬೆಂಬಲ ನೀಡಿದ್ದರೆ, ಪ್ರಣಬ್ ರಾಷ್ಟ್ರಪತಿಯಾಗಲು ಮೊದಲು ಬೆಂಬಲ ಘೋಷಿಸಿದ್ದೇ ಮಮತಾ. ಆ ಆತ್ಮೀಯತೆ ಈಗಲೂ ಇದೆ . ಹಾಗಾಗಿ ಈ ಗುರು ಶಿಷ್ಯರು ಒಟ್ಟಿಗೆ ಇತರ ಪ್ರಾದೇಶಿಕ ನಾಯಕರನ್ನು ಸೇರಿಸಿಕೊಂಡು ಹೊಸ ರಾಜಕೀಯ ಲೆಕ್ಕಾಚಾರ ಶುರುಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಪ್ರಣಬ್ ಸೂಚನೆಯಂತೆಯೇ ಮಮತಾ ಇತ್ತೀಚಿಗೆ ವಿವಿಧ ಪ್ರಾದೇಶಿಕ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ತೃತೀಯ ರಂಗವೊಂದರ ರಚನೆ ಇವರಿಬ್ಬರ ಉದ್ದೇಶವಾಗಿದ್ದು, ಸಂದರ್ಭ ನೋಡಿಕೊಂಡು ಇಬ್ಬರಲ್ಲಿ ಒಬ್ಬರು ಪ್ರಧಾನಿ ಗಾದಿಗೆ ಹಕ್ಕು ಪ್ರತಿಪಾದಿಸುವ ಯತ್ನದಲ್ಲಿದ್ದಾರೆ ಎಂದು ಹೇಳಲಾಗಿದೆ.
ಎನ್ ಡಿಟಿವಿ ಜೊತೆ ಮಾತನಾಡಿರುವ ಬಿಜು ಜನತಾದಳದ ಮುಖಂಡರೊಬ್ಬರು ಪ್ರಣಬ್ ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಮೋದಿ ಅವರಿಗೆ ಸಾಟಿಯಾಗಬಲ್ಲ ನಾಯಕ ಪ್ರಣಬ್ ಮಾತ್ರ ಎಂದು ನೇರವಾಗಿಯೇ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗಲು ಸಾಕಷ್ಟು ಯತ್ನಿಸಿದ ಬಳಿಕವೂ ಪ್ರಣಬ್ ಅವರಿಗೆ ಆ ಹುದ್ದೆ ಸಿಕ್ಕಿರಲಿಲ್ಲ. ಇಂದಿರಾ ಹತ್ಯೆಯಾದ ಬಳಿಕ ಇದೇ ಕಾರಣಕ್ಕೆ ಅವರು ಕೆಲವು ಸಮಯ ಪಕ್ಷದಿಂದಲೇ ಹೊರ ಹೋಗಿದ್ದರು. 2014 ರಲ್ಲೂ ಅವರು ಪ್ರಧಾನಿ ಹುದ್ದೆ ನಿರೀಕ್ಷಿಸಿದ್ದರೂ ಸೋನಿಯಾ ಅದನ್ನು ಮನಮೋಹನ್ ಸಿಂಗ್ ಅವರಿಗೆ ನೀಡಿದರು.
It was great pleasure to have enlightened company of Shri @CitiznMukherjee, Shri HD Deve Gowda, Shri LK Advani & Shri @SitaramYechury at Naveen Niwas. Had wonderful interaction over our much loved #Pakhala & Odia delicacies #PiajaPeetha #SagaBadi #Drumstickfry & famed #Chhenapoda pic.twitter.com/GWcpVGwL9t
— Naveen Patnaik (@Naveen_Odisha) January 27, 2018







