“ನನ್ನ ದೇವರು ಅಸಾರಾಮ್ ನನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದರು”

ಹೊಸದಿಲ್ಲಿ, ಮೇ 30: “ಅಸಾರಾಮ್ ನಮಗೆ ದೇವರು. ಕೆಲವು ವರ್ಷ ನಮ್ಮ ಜೀವನ ಅವರ ಸುತ್ತ ತಿರುಗುತ್ತಿತ್ತು. ಆದರೆ, ಒಂದು ದಿನ ದೇವರು ನಮ್ಮ ಎಲ್ಲ ಸಂತೋಷವನ್ನು ತಿಂದು ಹಾಕಿದರು. ಹಾಗೂ ನಮ್ಮ ಬದುಕನ್ನು ಸರಿಪಡಿಸಲಾಗದಂತೆ ಹಾನಿ ಮಾಡಿದರು. ದೇವರು ನನ್ನ 16 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದರು” ಎಂದು ಮಹಿಳೆಯೋರ್ವರು ಹೇಳಿದ್ದಾರೆ.
“ನನ್ನ ಮಗಳು ನನ್ನಲ್ಲಿ ನಂಬಿಕೆ ಇರಿಸಿ ಅಸಾರಾಮ್ ಬಾಪು ಅತ್ಯಾಚಾರ ಎಸಗಿರುವುದನ್ನು ಹೇಳಿರುವ ಆ ಕ್ಷಣ ನನ್ನ ಬದುಕಿನ ಕೆಟ್ಟ ನೆನಪು. ಇದನ್ನು ಹೇಳಿದಾಗ ನನ್ನ ಪತಿ ಪ್ರಜ್ಞೆ ತಪ್ಪಿಬಿದ್ದರು. ನನ್ನ ಮೂವರು ಮಕ್ಕಳಲ್ಲಿ ಇವಳು ಎರಡನೆಯವಳು. ನನ್ನ ಪುತ್ರ ಜನಿಸಿದ ನಾಲ್ಕು ವರ್ಷಗಳ ಬಳಿಕ ಈಕೆ ಜನಿಸಿದಳು. ಅವಳು ಜನಿಸಿದ ಸಂದರ್ಭ ನನ್ನ ಪತಿ ಗೌರವಯುತ ರಫ್ತು ವ್ಯವಹಾರ ನಡೆಸುತ್ತಿದ್ದರು. ನನಗಿಂತ ನನ್ನ ಪತಿಯ ಮೇಲೆಯೇ ಅವಳಿಗೆ ಪ್ರೀತಿ ಹೆಚ್ಚಿತ್ತು. ಆಕೆಯ ಸಂತೋಷದಿಂದಿರಬೇಕೆಂದು ನನ್ನ ಪತಿ ಸಾಕಷ್ಟು ಪ್ರಯತ್ನಿಸುತ್ತಿದ್ದರು. ಅತ್ಯಾಚಾರದ ವಿಷಯ ತಿಳಿದಾಗ ಅವರು ಪ್ರಜ್ಞೆ ತಪ್ಪಲು ಇದೇ ಕಾರಣ. ಈ ವಿಷಯವನ್ನು ತಿಳಿಸಿದ ಬಳಿಕ ನನ್ನ ಪುತ್ರಿ ಹಲವು ಗಂಟೆಗಳ ಕಾಲ ಅತ್ತಳು” ಎಂದು ಮಹಿಳೆ ಹೇಳಿದ್ದಾರೆ.
“ಅಂದು ನಾವು ಯಾರೂ ಪರಸ್ಪರ ಮಾತನಾಡಲಿಲ್ಲ. ನಾವು ನಿಶ್ಚೇಶ್ಟಿತರಾಗಿದ್ದೆವು. ಕನಸಿನಲ್ಲೂ ನಡೆಯದ ಈ ಘಟನೆ ನಿಜ ಬದುಕಿನಲ್ಲಿ ನಡೆದಾಗ ಎದುರಿಸುವುದಾದರೂ ಹೇಗೆ? ನಮ್ಮ ಜೀವನವನ್ನು ಹಾಳುಗೆಡಹಿದ ಒಬ್ಬರನ್ನು ದೇವರು ಎಂದು ಕರೆಯುವುದಾದರೂ ಹೇಗೆ? ದೇವರ ವಿರುದ್ಧ ಹೋರಾಡುವುದು ಹೇಗೆ?” ಎಂದು ಮಹಿಳೆ ಪ್ರಶ್ನಿಸಿದ್ದಾರೆ.
“ಒಮ್ಮೆ ಪೊಲೀಸ್ ದೂರು ದಾಖಲಿಸಿದ ಬಳಿಕ, ರಾಜಿ ಮಾಡಿಕೊಳ್ಳಿ, ಅಸಾರಾಮ್ ಬಾಪು ಪ್ರಭಾವಿ ವ್ಯಕ್ತಿ ಎಂದು ಹಲವರು ಹೇಳಿದ್ದರು. ಅಸಾರಾಮ್ ವಿರುದ್ಧ ಸವಾಲು ಹಾಕಿದರೆ, ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೆದರಿಸಿದರು. ಆದರೆ, ನಾನು ಪ್ರಕರಣ ಹಿಂದೆ ತೆಗೆಯಲಿಲ್ಲ” ಎಂದು ಮಹಿಳೆ ಹೇಳಿದ್ದಾರೆ.







