ಬಿಹಾರ, ಉ.ಪ್ರ., ಜಾರ್ಖಂಡ್‌ನಲ್ಲಿ ಬಿರುಗಾಳಿ, ಸಿಡಿಲಿಗೆ ಕನಿಷ್ಠ 40 ಜನರು ಬಲಿ

ಹೊಸದಿಲ್ಲಿ, ಮೇ 30: ಸೋಮವಾರ ಸಂಜೆ ಆರಂಭವಾಗಿರುವ ಬಿರುಗಾಳಿ ಹಾಗೂ ಸಿಡಿಲಿಗೆ ಉತ್ತರಪ್ರದೇಶ, ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಬಿರುಗಾಳಿ ಹಾಗೂ ಸಿಡಿಲಿನ ಘಟನೆಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರದ ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕಾನ್ಪುರ ಹಾಗೂ ರಾಯ್ ಬರೇಲಿಯಲ್ಲಿ ಬಿರುಗಾಳಿಗೆ ತಲಾ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಕಾರ್ಯದರ್ಶಿ ಅವಿನಾಶ್ ಅವಸ್ಥಿ ತಿಳಿಸಿದ್ದಾರೆ. ಈ ಘಟನೆಯಿಂದ ಉನ್ನಾವೊ ಹಾಗೂ ರಾಯ್‌ಬರೇಲಿ ಜಿಲ್ಲಿಯಲ್ಲಿ ಕೆಲವು ಗುಡಿಸಲುಗಳಿಗೆ ಹಾನಿಯಾಗಿವೆ. ಪರಿಹಾರ ಕಾರ್ಯಾಚರಣೆ ಹಾಗೂ 24 ಗಂಟೆಗಳ ಒಳಗೆ ಪರಿಹಾರ ಧನ ವಿತರಣೆ ಮಾಡುವಂತೆ ಸಂಬಂಧಿತ ಜಿಲ್ಲಾ ದಂಡಾಧಿಕಾರಿಗಳು ನಿರ್ದೇಶಿಸಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಬಿರುಗಾಳಿ ಹಾಗೂ ಸಿಡಿಲಿಗೆ ಕಳೆದ 24 ಗಂಟೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕಳೆದ 1 ತಿಂಗಳಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.





