ಶಾಲೆ ಪ್ರಾರಂಭಗೊಂಡು ಇಂದಿಗೆ ಮೂರನೆ ದಿನ : ಮಕ್ಕಳ ಚಿತ್ತ ಶಾಲೆಯತ್ತ ಮೂಡಿಸಲು ವಿಶಿಷ್ಟ ಕಾರ್ಯಕ್ರಮ

ಬೆಂಗಳೂರು, ಮೇ 29: ಶಾಲೆಗಳು ಪ್ರಾರಂಭಗೊಂಡು ಎರಡು ದಿನಗಳು ಕಳೆದಿದ್ದು, ಮಕ್ಕಳನ್ನು ಶಾಲೆಯತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಕಷಕರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ಕಳೆದ ಎರಡು ದಿನದಿಂದ ಪ್ರತಿ ಹಳ್ಳಿಯಲ್ಲೂ ಹಬ್ಬದಂತಹ ವಾತಾವರಣ ನಿರ್ಮಾಣವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಪೋಷಕರಿಗೆ ಬೆಂಬಲವಾಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ‘ಹೂ’ ನೀಡುವುದು, ಸಿಹಿಯನ್ನು ಹಂಚುವುದರ ಮೂಲಕ ತರಗತಿಗಳಿಗೆ ಬರಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಹಲವು ಹಳ್ಳಿಗಳಲ್ಲಿ ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿಯ ಜೊತೆಗೂಡಿ ಜಾಥಾ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ಮನೆಯ ಸದಸ್ಯರಿಗೂ ಶಾಲೆ ಹಾಗೂ ಶಿಕ್ಷಣದ ಕುರಿತು ಅರಿವು ಮೂಡಿಸುವಂತಹ ಕರಪತ್ರ ಕೊಡಲಾಗುತ್ತಿದೆ. ಹಾಗೂ ಹಳ್ಳಿಯ ಪ್ರಮುಖ ಸ್ಥಳಗಳಲ್ಲಿ ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಸಾಕ್ಷಚಿತ್ರ ಪ್ರದರ್ಶನ: ಸಾರ್ವಜನಿಕ ಶಿಕ್ಷಣ ಇಲಾಖೆ 2018-19ನೆ ಶೈಕ್ಷಣಿಕ ವರ್ಷದ ಶಾಲೆಯ ಪ್ರಾರಂಭೋತ್ಸವ ಹೇಗಿರಬೇಕು. ಪೋಷಕರಿಗೆ ಶಿಕ್ಷಣದ ಕುರಿತು ಜಾಗೃತಿ ಹಾಗ ಸರಕಾರಿ ಶಾಲೆಯಲ್ಲಿರುವ ಸೌಕರ್ಯಗಳ ಕುರಿತು ಮಾಹಿತಿ ನೀಡುವಂತಹ ಸಾಕ್ಷ ಚಿತ್ರವನ್ನು ನಿರ್ಮಿಸಿದ್ದು, ಆ ಪ್ರಕಾರವಾಗಿ ಜಾಗೃತಿ ಮೂಡಿಸುವಂತೆ ಸೂಚಿಲಾಗಿದೆ.
ಶಿಕ್ಷಣ ಕುರಿತ ಜಾಗೃತಿ ಬರಹಗಳು
ವಿದ್ಯೆ ಇದ್ದವನ ಮುಖವು ಮುದ್ದಿಕ್ಕುವಂತಿಹುದು, ಎಲ್ಲರೂ ಮಕ್ಕಳ ಹಕ್ಕನ್ನು ರಕ್ಷಿಸಿ, ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿ ಮಾಡಿ, ಮಕ್ಕಳು ಜಗತ್ತನ್ನು ನೋಡಲು ಶಿಕ್ಷಣ ಕೊಡಿಸಿ, ಭಾರತದ ಸಂಸ್ಕೃತಿ ಉಳಿಸಲು ಶಿಕ್ಷಣ ಕೊಡಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗೋಣ, ಕಲಿತವರು ಕಲಿಸಿರಿ, ಕಲಿಯದವರು ಕಲಿಯಿರಿ, ಶಿಕ್ಷಣ ಕೊಡಿಸುವಲ್ಲಿ ಲಿಂಗ ಭೇದ ಮಾಡದೆ ಶಿಕ್ಷಣ ಕೊಡಿಸಿ, ಶಿಕ್ಷಣ ಕೊಡಿಸಿರಿ ಮಕ್ಕಳ ಬಾಳು ಬೆಳಗಿಸಿರಿ, ಸರಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕೊಡುತ್ತಿದೆ. ದೈಹಿಕ ಮತ್ತು ಮಾನಸಿಕ ಸಮೃದ್ಧಿಗೆ ಉತ್ತಮ ಶಿಕ್ಷಣ ಬೇಕು.







