ಬೆಂಗಳೂರು: ಬುರ್ಖಾ ಧರಿಸಿ ಮಸೀದಿ ಬಳಿ ಮಚ್ಚು ಹಿಡಿದು ಓಡಾಡುತ್ತಿದ್ದವ ಪೊಲೀಸ್ ವಶಕ್ಕೆ

ಬೆಂಗಳೂರು, ಮೇ 29: ಮಸೀದಿಯೊಂದರ ಬಳಿ ಬುರ್ಖಾ ಧರಿಸಿ, ಕೈಯಲ್ಲಿ ಮಚ್ಚು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಶಿವರಾಜ್(25) ಎಂದು ಪೊಲೀಸರು ಗುರುತಿಸಿದ್ದು, ಕೆಜಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಪ್ರಕರಣದ ವಿವರ: ಸೋಮವಾರ ರಾತ್ರಿ ನಗರದ ಕೆಜಿಹಳ್ಳಿಯ ಎಚ್‌ಆರ್‌ಬಿಆರ್ ಲೇಔಟ್‌ನ ಮಸೀದಿ ಬಳಿ ಬುರ್ಖಾ ಧರಿಸಿದ್ದ ಶಿವರಾಜ್, ಕೈ ಚೀಲದಲ್ಲಿ ಮಚ್ಚು ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎನ್ನಲಾಗಿದೆ.
ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಬುರ್ಖಾ ಪರದೆ ಸರಿಸಿ ನೋಡಿದಾಗ ಆ ವ್ಯಕ್ತಿ ಮಹಿಳೆಯಲ್ಲ ಎಂದು ಖಚಿತವಾಗುತ್ತಿದ್ದಂತೆ, ತಕ್ಷಣವೇ ಆತನನ್ನು ಹಿಡಿದು ಪರಿಶೀಲಿಸಿದಾಗ ಆತನ ಬಳಿ ಮಚ್ಚು ಸಿಕ್ಕಿದೆ.
ಕೊಲೆಗಾಗಿ ಬುರ್ಖಾ: ಆರೋಪಿಯನ್ನು ರಾಯಚೂರು ಮೂಲದ ಶಿವರಾಜ್ ಎಂದು ಗುರುತಿಸಲಾಗಿದ್ದು, ಸ್ನೇಹಿತನೋರ್ವನಿಂದ ಸಾಲ ಪಡೆದಿದ್ದ ಆತ ಸಾಲ ವಾಪಸ್ ಮಾಡುವಂತೆ ಬಲವಂತ ಮಾಡುತ್ತಿದ್ದ. ಹೀಗಾಗಿ, ಆತನಿಗೆ ಬೆದರಿಕೆ ಹಾಕಲು ಮಚ್ಚು ಮತ್ತು ಬುರ್ಖಾ ಹಾಕಿಕೊಂಡಿದ್ದ ಎನ್ನಲಾಗಿದೆ.
ಸ್ನೇಹಿತನ ಕೊಲೆ ಮಾಡಲು ಶಿವರಾಜ್ ಈ ರೀತಿ ಬುರ್ಖಾ ಹಾಕಿಕೊಂಡು ಸಂಚು ನಡೆಸಿದ್ದ ಎಂದು ಸ್ಥಳೀಯರು ಆರೋಪಿಸಿ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಕೈಗೊಳ್ಳಲಾಗಿದೆ.







