ನಿಪಾಹ್ ವೈರಸ್ ಗೆ ಬಾವಲಿಯೇ ಕಾರಣ: ಎನ್‌ಸಿಡಿಸಿ

ಕೋಝಿಕೋಡ್, ಮೇ 29: ನಿಪಾಹ್ ವೈರಸ್ ಹರಡಲು ಹಣ್ಣು ತಿನ್ನುವ ಬಾವಲಿಗಳೇ ಕಾರಣ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್‌ಸಿಡಿಸಿ) ಮಂಗಳವಾರ ದೃಢಪಡಿಸಿದೆ. ‘‘ನಿಪಾಹ್ ವೈರಸ್ ಅನ್ನು ಹಣ್ಣು ತಿನ್ನುವ ಬಾವಲಿಗಳು ಹರಡುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪರೀಕ್ಷಾ ಫಲಿತಾಂಶ ಇದನ್ನು ಇನ್ನಷ್ಟು ಸಾಬೀತುಪಡಿಸುತ್ತದೆ. ಒಂದುವೇಳೆ ಬಾವಲಿಗಳ ದೇಹದ್ರವಗಳ ಮಾದರಿಗಳ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬಂದರೂ ಅದು ವೈಜ್ಞಾನಿಕ ಸತ್ಯವನ್ನು ಅಲ್ಲಗಳೆಯುವುದಿಲ್ಲ. ಇದಕ್ಕೆ ಕಾರಣ ನಿಪಾಹ್ ವೈರಸ್ ಅನ್ನು ಕಡಿಮೆ ಶೇಕಡ ಬಾವಲಿಗಳು ಮಾತ್ರ ಹರಡುತ್ತವೆ’’ಎಂದು ಎನ್‌ಸಿಡಿಸಿ ಜಂಟಿ ನಿರ್ದೇಶಕ ಎಂ.ಕೆ. ಶೌಕತ್ ಅಲಿ ತಿಳಿಸಿದ್ದಾರೆ.
ಈ ಹಿಂದೆ ವೈರಸ್ ಹೊಂದಿರುವ, ತನಿಖೆ ನಡೆಸುವ ಹಾಗೂ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಸಿದ್ಧಗೊಳಿಸುವ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಎನ್‌ಸಿಡಿಸಿ ತಂಡ ರಾಜ್ಯ ಸರಕಾರಕ್ಕೆ ನೆರವು ನೀಡಿತ್ತು. ಎನ್‌ಸಿಡಿಸಿಯ ಎರಡನೆ ನಿಯೋಗ ಈಗ ಪೆರಂಬ್ರಾದಲ್ಲಿ ಇದ್ದು, ಹರಡುತ್ತಿರುವ ನಿಪಾಹ್ ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿದೆ. ಶಂಕಿತ ಪ್ರಕರಣ ಪತ್ತೆ ಹಚ್ಚಲು ಹಾಗೂ ನಿರಂತರ ಕಣ್ಗಾವಲಿಗೆ ರಾಜ್ಯ ಸರಕಾರ ಎನ್‌ಸಿಡಿಸಿ ನೆರವನ್ನು ಕೋರಿತ್ತು. ನಿಪಾಹ್ ಸೋಂಕಿನ ಶಂಕಿತರ ಪಟ್ಟಿಯಲ್ಲಿರುವವರು ಪ್ರವಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ಸೋಂಕನ್ನು ಸಮರ್ಥವಾಗಿ ನಿಯಂತ್ರಿಸಬಹುದು ಎಂದು ಶೌಕತ್ ಅಲಿ ಹೇಳಿದ್ದಾರೆ.
ಎನ್‌ಸಿಡಿಸಿ ಅಧಿಕಾರಿಗಳ ಪ್ರಕಾರ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ‘‘ಹೊಸ ಪ್ರಕರಣಗಳು ವರದಿಯಾಗುತ್ತಿರುವ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ. ಇದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ತೋರಿಸುತ್ತದೆ.’’ ಎಂದು ಶೌಕತ್ ಅಲಿ ತಿಳಿಸಿದ್ದಾರೆ. ಈ ನಡುವೆ ಹಣ್ಣು ತಿನ್ನುವ ಬಾವಲಿಗಳ ದೇಹದ್ರವಗಳ ಮಾದರಿಯನ್ನು ಇದುವರೆಗೆ ಸಂಗ್ರಹಿಸಿಲ್ಲ. ಇದರೊಂದಿಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ತಜ್ಞರು, ಅರಣ್ಯ ಇಲಾಖೆಯ ಸಿಬ್ಬಂದಿ ಬಾವಲಿಗಳ ದೇಹ ದ್ರವ ಮಾದರಿ ಸಂಗ್ರಹಿಸಲು ಅಲ್ಲಿದ್ದಾರೆ. ಸೋಮವಾರ ಸಂಜೆಯಿಂದ ಮಳೆ ಸುರಿಯುತ್ತಿರುವುದರಿಂದ ಹಣ್ಣು ತಿನ್ನುವ ಬಾವಲಿಗಳ ದೇಹದ್ರವ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಡಾ. ಎನ್.ಎನ್. ಸಸಿ ತಿಳಿಸಿದ್ದಾರೆ. ಹಿಡಿಯುವ ಸಂದರ್ಭ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಸೋಂಕಿತ ಬಾವಲಿಗಳ ದೇಹ ದ್ರವ ಮಾದರಿ ಸಂಗ್ರಹಿಸುವುದು ಅತಿ ಅಪಾಯದ ಕೆಲಸ. ಮಾದರಿಯನ್ನು ಬೋಪಾಲದಲ್ಲಿರುವ ಅತ್ಯಧಿಕ ಭದ್ರತೆಯ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಿ ಕೊಡಲಾಗುವುದು ಅವರು ತಿಳಿಸಿದ್ದಾರೆ.







