ಏರ್ ಏಶ್ಯಾ ಸಿಇಒ ಫೆರ್ನಾಂಡಿಸ್ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಮೇ 29: ಅಂತರಾಷ್ಟ್ರೀಯ ಹಾರಾಟ ಪರವಾನಿಗೆ ಪಡೆಯುವ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಏರ್‌ಏಶ್ಯಾ ಸಮೂಹಸಂಸ್ಥೆಯ ಸಿಇಒ ಟೋನಿ ಫೆರ್ನಾಂಡಿಸ್ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಅಂತರಾಷ್ಟ್ರೀಯ ವಿಮಾನ ಹಾರಾಟದ ಪರವಾನಿಗೆ ಪಡೆಯುವ ಸಂದರ್ಭ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದ 5/20 ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂಬ ಆರೋಪದ ಕುರಿತ ಪ್ರಕರಣ ಇದಾಗಿದೆ. ಅಲ್ಲದೆ ‘ಫಾರಿನ್ ಇನ್‌ವೆಸ್ಟ್‌ಮೆಂಟ್ ಪ್ರೊಮೋಷನ್ ಬೋರ್ಡ್’ ನಿಯಮವನ್ನು ಉಲ್ಲಂಘಿಸಿದ ಆರೋಪವೂ ಇವರ ವಿರುದ್ಧವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5/20 ನಿಯಮದ ಪ್ರಕಾರ ಅಂತರಾಷ್ಟ್ರೀಯ ವಿಮಾನ ಹಾರಾಟದ ಪರವಾನಿಗೆ ಪಡೆಯಬೇಕಿದ್ದರೆ ವಿಮಾನಯಾನ ಸಂಸ್ಥೆ ಕನಿಷ್ಟ ಐದು ವರ್ಷದ ಅನುಭವ ಹೊಂದಿರಬೇಕು ಹಾಗೂ 20 ವಿಮಾನಗಳನ್ನು ಹೊಂದಿರಬೇಕು.
ಏರ್ ಏಶ್ಯಾದ ಸಿಇಒ ಟೋನಿ ಫೆರ್ನಾಂಡಿಸ್(ಅಂಥೋಣಿ ಫ್ರಾನ್ಸಿಸ್), ಟ್ರಾವೆಲ್ ಫುಡ್ ಮಾಲಕ ಸುನಿಲ್ ಕಪೂರ್, ಏರ್ ಏಶ್ಯಾ ನಿರ್ದೇಶಕ ಆರ್. ವೆಂಕಟ್ರಮಣ, ವಾಯುಯಾನ ಸಲಹೆಗಾರ ದೀಪಕ್ ತಲ್ವಾರ್, ಸಿಂಗಾಪುರ ಮೂಲದ ಎಸ್‌ಎನ್‌ಆರ್ ಟ್ರೇಡಿಂಗ್ ಸಂಸ್ಥೆಯ ನಿರ್ದೇಶಕ ರಾಜೇಂದ್ರ ದುಬೆ ಹಾಗೂ ಗುರುತು ಪತ್ತೆಹಚ್ಚಲಾಗದ ಸರಕಾರಿ ಉದ್ಯೋಗಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ದಿಲ್ಲಿ, ಮುಂಬೈ ಮತ್ತು ಬೆಂಗಳೂರಿನ ಆರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







