ಮೃತ ಮಹಿಳೆಗೆ, ಮನೆ ಹಾನಿಗೆ ವಾರದೊಳಗೆ ಪರಿಹಾರ: ಶಾಸಕ ಖಾದರ್
ಮಂಗಳೂರು ಸಹಿತ ಉಳ್ಳಾಲ ಕ್ಷೇತ್ರದಾದ್ಯಂತ ಭಾರೀ ಮಳೆ

ಮಂಗಳೂರು, ಮೇ 29: ಮುಂಗಾರು ಮಳೆಗೆ ಉದಯನಗರದ ನಿವಾಸಿ ಮೋಹಿಣಿ ಎಂಬವರು ಮೃತಪಟ್ಟಿದ್ದು, ಅವರಿಗೆ ಶೀಘ್ರದಲ್ಲೇ ಸರಕಾರದಿಂದ ಪರಿಹಾರ ನೀಡಲಾಗುವುದು. ಅಲ್ಲದೆ, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ವಾರದೊಳಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರು ಸಹಿತ ಉಳ್ಳಾಲ ಕ್ಷೇತ್ರದಾದ್ಯಂತ ಭಾರೀ ಮಳೆಯಾಗಿದ್ದು, ಕೆಲವೆಡೆಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಇಂತಹ ಮನೆಗಳನ್ನು ಗುರುತಿಸಿ ವಾರದೊಳಗೆ ಪರಿಹಾರ ಕಲ್ಪಿಸುವಂತೆ ಖಾದರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ಈಗಾಗಲೇ ಸ್ಪಂದಿಸಿದ್ದು, ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರವನ್ನು ತೆರೆಯುವುದಾಗಿ ಅವರು ಹೇಳಿದರು.
ಕೇಂದ್ರ ಸಾರಿಗೆ ಸಚಿವರಿಗೆ ದೂರು
ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆಯಿಂದಾಗಿ ಮಂಗಳೂರಿನಲ್ಲಿ ಮಳೆಯ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಲು ಕಾರಣವಾಗಿದೆ. ಹೆದ್ದಾರಿಯಲ್ಲಿ ಮಳೆ ನೀರು ಹಾದು ಹೋಗಲು ವ್ಯವಸ್ಥೆ ಇಲ್ಲ. ಈ ಬಗ್ಗೆ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಸಭೆ ಕರೆದು ಚರ್ಚಿಸುವಂತೆ ತಿಳಿಸಿದ್ದರೂ ಸ್ಪಂದಿಸಿಲ್ಲ. ಕಾಟಾಚಾರಕ್ಕೆ ಸಹಾಯಕ ಅಧಿಕಾರಿಯೊಬ್ಬರು ವೀಕ್ಷಣೆ ಮಾಡಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಹಿಂದಿರುಗಿ ಬರುವುದಿಲ್ಲ. ಹೆದ್ದಾರಿಯಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಈ ಬಗ್ಗೆ ಹೈವೇ ಪ್ರಾಧಿಕಾರ ಅಧಿಕಾರಿಗಳ ಸಭೆ ಕರೆಯುವಂತೆ ಒತ್ತಾಯಿಸಿ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರಿಗೆ ಮನವಿ ನೀಡುವುದಾಗಿ ಖಾದರ್ ತಿಳಿಸಿದ್ದಾರೆ.







