ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದೇನು ?

ಮೈಸೂರು, ಮೇ. 29: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಒಂದು ವರ್ಷ ಪೂರೈಸಿದ ನಂತರ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕೆ ಬೇಡವೆ ಎಂಬುದನ್ನು ಪಕ್ಷದ ವರಿಷ್ಟರು ನಿರ್ಧರಿಸಲಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ವೈಶಿಷ್ಟ್ಯ ಪೂರ್ಣ ಚುನಾವಣೆಯಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯ ಜನರು ಜೆಡಿಎಸ್ ಪಕ್ಷಕ್ಕೆ ಐದು ಸ್ಥಾನಗಳನ್ನು ನೀಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಜಿಲ್ಲೆಯ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮಾಧ್ಯಮದವರಿಗೂ ಧನ್ಯವಾದ ತಿಳಿಸಿದರು.
ಕೋಮುಶಕ್ತಿಗಳನ್ನು ದೂರ ಇಡಬೇಕು ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಜೊತೆ ಅನಿವಾರ್ಯವಾಗಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತ ಮನೋಭಾವವುಳ್ಳ ಪಕ್ಷಗಳು, ಹಾಗಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಸಮ್ಮಿಶ್ರ ಸರಕಾರ ಒಂದು ವರ್ಷ ಪೂರೈಸಿದ ನಂತರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆ, ಬೇಡವೆ ಎಂದು ನಮ್ಮ ಪಕ್ಷದ ನಾಯಕರುಗಳು ತೀರ್ಮಾನಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಪೂರೈಸಲಿದ್ದಾರೆ ಎಂಬ ನಂಬಿಕೆ ನಮಗಿದೆ. ಯಾರೋ ಕೆಲವರು ಅಲ್ಪಾವಧಿ ಮುಖ್ಯಮಂತ್ರಿ ಹಾಗೆ ಹೀಗೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ಮಾತಕತೆ ನಡೆದಿದೆ. ಹಾಗಾಗಿ ಬೇರೆ ಯಾರಾದರೂ ಮುಖ್ಯಮಂತ್ರಿ ಅಧಿಕಾರವಧಿ ಬಗ್ಗೆ ಮಾತನಾಡಿದರೆ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‍ನವರು ಷರತ್ತು ಹಾಕಿದ್ದಾರೆ ಎಂಬುದು ಮಾಧ್ಯಮಗಳ ಊಹಾಪೋಹ, ಕಾಂಗ್ರೆಸ್ ಪಕ್ಷದವರು ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ ನಮ್ಮ ನಾಯಕರುಗಳು ಮೈತ್ರಿಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಸರಕಾರಕ್ಕೆ ಮುಳುವಾಗಬಾರದು ಎಂಬ ಉದ್ದೇಶದಿಂದ ಸಚಿವ ಸಂಪುಟವನ್ನು ಸ್ವಲ್ಪ ವಿಳಂಬ ಮಾಡಲಾಗಿದೆ. ರಾಹುಲ್ ಗಾಂಧಿ ಅಮೇರಿಕ ಪ್ರವಾಸ ಕೈಗೊಂಡಿದ್ದರಿಂದಲೂ ವಿಳಂಬವಾಯಿತು ಎಂದರು.
ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿ ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂದು ಈಗಾಗಲೇ ಚರ್ಚಿಸಿದ್ದಾರೆ. ಇಂದು ಅಥವಾ ನಾಳೆ ಅಂತಿಮಗೊಳ್ಳಲಿದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಜೆಡಿಎಸ್ ಪಕ್ಷಕ್ಕೆ 12 ಸ್ಥಾನ ನೀಡುವುದಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ 37 ಜನ ಶಾಸಕರಿದ್ದಾರೆ. ಎಲ್ಲರೂ ಮಂತ್ರಿ ಸ್ಥಾನದ ಆಕಾಂಕ್ಷಿಗಳೇ ವರಿಷ್ಟರು ಯಾರಿಗೆ ಸಚಿವ ಸ್ಥಾನ ನೀಡುತ್ತಾರೋ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಖಚಿತ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದು ಖಚಿತ. ಚುನಾವಣಾ ಪೂರ್ವ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನ ಆಶೀರ್ವಾದ ಮಾಡಲಿಲ್ಲ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರ ಇರುವುದರಿಂದ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಸಾಧ್ಯವಿಲ್ಲ, ಸಿಎಂ ಕುಮಾರಸ್ವಾಮಿ ಈಗಾಗಲೇ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಸಾಲ ಮನ್ನಾ ಮಾಡುವ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಒಂದು ವಾರದೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಆದರೂ ಬಿಜೆಪಿಯವರು ಅನಾವಶ್ಯಕವಾಗಿ ರಾಜ್ಯ ಬಂದ್ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಕರೆ ನೀಡಿದ್ದ ಬಂದ್‍ಗೆ ರೈತ ಸಂಘಟನೆಗಳೆ ಬೆಂಬಲ ನೀಡಲಿಲ್ಲ, ಮೈತ್ರಿ ಸರಕಾರದಲ್ಲಿ ಇನ್ನೂ ಸಚವ ಸಂಪುಟ ರಚನೆಯಾಗಿಲ್ಲ, ಅದನ್ನೆಲ್ಲಾ ನೋಡಿಕೊಂಡು ರೈತರ ಸಾಲ ಮನ್ನಾ ಕುರಿತು ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್.ವಿಶ್ವನಾಥ್, ಸಾ.ರಾ.ಮಹೇಶ್, ಕೆ.ಮಹದೇವ್, ಪರಾಜಿತ ಜೆಡಿಎಸ್ ಅಭ್ಯರ್ಥಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ದಯಾನಂದ ಮೂರ್ತಿ, ಅಝೀಝ್ ಅಬ್ದುಲ್ಲಾ, ಕೆ.ವಿ.ಮಲ್ಲೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಜಿ.ಪಂ.ಸದಸ್ಯರಾದ ಮಹದೇವೇಗೌಡ, ಬೀರಿಹುಂಡಿ ಬಸವಣ್ಣ, ಜೆಡಿಎಸ್ ಮುಖಂಡರಾದ ಅಶೋಕಪುರಂ ರೇವಣ್ಣ, ದೂರ ಮಂಜುನಾಥ್, ಉಮಾಶಂಕರ್, ಕೃಷ್ಣ ನಗರಪಾಲಿಕೆ ಸದಸ್ಯರಾದ ಶೈಲೇಂದ್ರ, ಬಿ.ಎಲ್.ಭೈರಪ್ಪ, ಆರ್.ಲಿಂಗಪ್ಪ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಪಾಲಿಗೆ ಎಲ್ಲ ಅವಕಾಶಗಳೂ ಕೈ ತಪ್ಪಿ ಹೋಗಿವೆ. ಹೀಗಾಗಿ ಮುರಳೀಧರ್ ರಾವ್ ಸೇರಿದಂತೆ ಎಲ್ಲರೂ ನಮ್ಮ ವಿರುದ್ಧ ಮಾತನಾಡುತ್ತಾರೆ. ಕಾಂಗ್ರೆಸ್- ಜೆಡಿಎಸ್, ಬಿಜೆಪಿ- ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಚುನಾವಣೆ ನಡೆದಿದೆ. ಆದರೆ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಒಟ್ಟಾಗಿ ಹೋಗಿದ್ದೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ.
ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ.







