ಉ.ಕೊರಿಯ ವಿರುದ್ಧ ಹೊಸ ನಿರ್ಬಂಧವಿಲ್ಲ: ಅಮೆರಿಕ
ಟ್ರಂಪ್- ಕಿಮ್ ಜಾಂಗ್ ಶೃಂಗಸಭೆಗೆ ಸುಗಮ ಹಾದಿ ಕಲ್ಪಿಸುವ ಉದ್ದೇಶ

ವಾಶಿಂಗ್ಟನ್,ಮೇ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಜೂನ್‌ನಲ್ಲಿ ನಡೆಯಲಿರುವ ಪ್ರಸ್ತಾಪಿತ ಶೃಂಗಸಭೆಗೆ ಸುಗಮಹಾದಿ ಕಲ್ಪಿಸುವ ಉದ್ದೇಶದಿಂದ ಅಮೆರಿಕವು ಉತ್ತರ ಕೊರಿಯದ ವಿರುದ್ಧ ಹೊಸತಾಗಿ ಯಾವುದೇ ಪ್ರಮುಖ ನಿರ್ಬಂಧಗಳನ್ನು ಹೇರದಿರಲು ನಿರ್ಧರಿಸಿದೆಯೆಂದು ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದೆ.
ಉತ್ತರಕೊರಿಯ ವಿರುದ್ಧ ಮಂಗಳವಾರ ಹೊಸ ನಿರ್ಬಂಧಗಳನ್ನು ಘೋಷಿಸಲು ಶ್ವೇತಭವನ ಸಿದ್ಥತೆ ನಡೆಸಿತ್ತು. ಆದರೆ ಉತ್ತರಕೊರಿಯ ಜೊತೆ ಶಾಂತಿ ಮಾತುಕತೆಯನ್ನು ಮುಂದುವರಿದಿರುವ ಹಿನ್ನೆಲೆಯಲ್ಲಿ ಹೊಸ ನಿರ್ಬಂಧಗಳ ಹೇರಿಕೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆಯೆಂದು ಅಮೆರಿಕದ ವಿದೇಶಾಂಗ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಕೊರಿಯ ಜೊತೆ ವ್ಯಾಪಾರ ಸಂಬಂಧವನ್ನು ಇರಿಸಿಕೊಂಡಿರುವ ರಶ್ಯ ಹಾಗೂ ಚೀನಾದ ಸಂಸ್ಥೆಗಳಿಗೆ ನಿಷೇಧ ಸೇರಿದಂತೆ 30ಕ್ಕೂ ಅಧಿಕ ನಿರ್ಬಂಧಗಳನ್ನು ಅಮೆರಿಕದ ಖಜಾನೆ ಇಲಾಎಖೆಯು ಸಿದ್ಧಪಡಿಸಿಕೊಂಡಿತ್ತು.
ಪ್ರಸ್ತುತ ಅಮೆರಿಕದ ಅಧಿಕಾರಿಗಳು, ದಕ್ಷಿಣ ಕೊರಿಯ ಗಡಿಯಲ್ಲಿರುವ ಕದನವಿರಾಮದ ವ್ಯಾಪ್ತಿಯಲ್ಲಿರುವ ಗ್ರಾಮವಾದ ಪನುಮುಂಜೊಮ್ ಎಂಬಲ್ಲಿ ಉ.ಕೊರಿಯದ ಅಧಿಕಾರಿಗಳ ಜೊತೆ ಮಾತುಕತೆಯಲ್ಲಿ ತೊಡಗಿದ್ದಾರೆ. ಜೂನ್ 12ರಂದು ಸಿಂಗಾಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉ.ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆಯಲಿರುವ ಪ್ರಸ್ತಾಪಿತ ಶೃಂಗಸಬೆಗೆ ಮತ್ತೆ ಚಾಲನೆ ನೀಡುವುದೇ ಇದರ ಉದ್ದೇಶವಾಗಿದೆ. ಉತ್ತರ ಕೊರಿಯವು ಅಮೆರಿಕದ ವಿರುದ್ಧ ಅಗಾಧವಾದ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಹಾಗೂ ಬಹಿರಂಗವಾಗಿ ದ್ವೇಷ ಕಾರುತ್ತಿರುವ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ನಡೆಯಲುದ್ದೇಶಿಸಲಾದ ಶೃಂಗಸಭೆಯನ್ನು ರದ್ದುಪಡಿಸುವುದಾಗಿ ವಾಶಿಂಗ್ಟನ್ ಘೋಷಿಸಿತ್ತು.







