ಬಾಂಗ್ಲಾದಲ್ಲಿ ಡ್ರಗ್ಸ್ ಸಮರ: 15 ದಿನಗಳಲ್ಲಿ 102 ಮಂದಿಯ ಹತ್ಯೆ

ಢಾಕಾ,ಮೇ 29: ಮಾದಕದ್ರವ್ಯ ಜಾಲಗಳ ವಿರುದ್ಧ ಬಾಂಗ್ಲಾ ಸಾರಿರುವ ಸಮರ ಮುಂದುವರಿದಿದ್ದು, ಕಳೆದ ಹದಿನೈದು ದಿನಗಳಲ್ಲಿ 100ಕ್ಕೂ ಅಧಿಕ ಮಂದಿ ಶಂಕಿತ ಮಾದಕದ್ರವ್ಯ ವ್ಯಾಪಾರಿಗಳನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮಂಗಳವಾರ ಮುಂಜಾನೆ 10 ಮಂದಿ ಮಾದಕದ್ರವ್ಯ ಕಳ್ಳಸಾಗಣೆದಾರರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇವರ ಪೈಕಿ ಕೆಲವರು ಎನ್‌ಕೌಂಟರ್‌ನಲ್ಲಿ ಮೃತಪಟ್ಟರೆ, ಇನ್ನೂ ಕೆಲವರು ಮಾದಕದ್ರವ್ಯ ವ್ಯಾಪಾರಿಗಳ ನಡುವಿನ ಘರ್ಷಣೆಯಲ್ಲಿ ಹತರಾಗಿದ್ದಾರೆ.
ಬಾಂಗ್ಲಾದಲ್ಲಿ ಉಲ್ಬಣಿಸಿರುವ ಯಾಬಾ ಮಾದಕದ್ರವ್ಯ ಮಾರಾಟ ಜಾಲವನ್ನು ಮಟ್ಟಹಾಕುವ ಪ್ರಯತ್ನವಾಗಿ ಬಾಂಗ್ಲಾದೇಶವು ಮೇ ತಿಂಗಳ ಮಧ್ಯದಲ್ಲಿ ಆರಂಭಿಸಿದ ಮಾದಕದ್ರವ್ಯದ ವಿರುದ್ಧ ನಡೆಸಿದ ಸಮರದಲ್ಲಿ ಈವರೆಗೆ 102 ಮಂದಿ ಶಂಕಿತ ಡ್ರಗ್ಸ್ ಕಳ್ಳಸಾಗಣೆದಾರರು ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲಿ ಮಾದಕದ್ರವ್ಯ ಪಿಡುಗನ್ನು ಸಂಪೂರ್ಣವಾಗಿ ನಿಯಂತ್ರಿಸುವವರೆಗೆ ರಕೆಗೆ ಈ ಸಮರ ಮುಂದುವರಿಯಲಿದೆ ಎಂದು ಬಾಂಗ್ಲಾ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ತಿಳಿಸಿದ್ದಾರೆ.
ಮೇ 15ರಂದು ಮಾದಕದ್ರವ್ಯ ಜಾಲಗಳ ವಿರುದ್ಧ ಕಾರ್ಯಾಚರಣೆ ಆರಂಭಗೊಂಡ ಬಳಿಕ 12 ಸಾವಿರಕ್ಕೂ ಅಧಿಕ ಆರೋಪಿ ಡೀಲರ್‌ಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಹಲವರಿಗೆ ಸಂಚಾರಿ ನ್ಯಾಯಾಲಯಗಳ ಮೂಲಕ ಏಳು ದಿನಗಳಿಂದ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಮಾದಕದ್ರವ್ಯದ ವಿರುದ್ಧ ಕಾರ್ಯಾಚರಣೆಯ ಹೆಸರಿನಲ್ಲಿ ಅಮಾಯಕರನ್ನು ಹತ್ಯೆಗೈಯಲಾಗುತ್ತಿದೆಯೆಂಬ ಮಾನವಹಕ್ಕು ಗುಂಪುಗಳ ಆರೋಪಗಳನ್ನು ನಿರಾಕರಿಸಿರುವ ಅಸಾದುಝ್ಝಮಾನ್ ಖಾನ್ ಅವರು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವವರೆಗೆ ಮಾದಕದ್ರವ್ಯದ ವಿರುದ್ಧ ಸಮರ ಮುಂದುವರಿಯಲಿದೆಯೆಂದು ಹೇಳಿದ್ದಾರೆ.
ಹತ್ಯೆಯಾದವರಲ್ಲಿ ಹೆಚ್ಚಿನವರು ಬಂದೂಕುಗಳನ್ನು ಹೊಂದಿದ್ದರು. ಪೊಲೀಸರನ್ನು ಕಂಡ ಕೂಡಲೇ ಅವರು ಗುಂಡು ಹಾರಿಸಿದ್ದಾರೆ ಎಂದರು. ಹತ್ಯೆಯಾದವರ್ಯಾರೂ ಒಳ್ಳೆಯವರಲ್ಲ. ಅವರಲ್ಲಿ ಪ್ರತಿಯೊಬ್ಬರೂ ಹತ್ತರಿಂದ ಹನ್ನೆರಡರಷ್ಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದರು.
ಬಾಂಗ್ಲಾದಲ್ಲಿ ಯಾಬಾ ಎಂಬ ಮಾದಕದ್ರವ್ಯವು ಪಿಡುಗಾಗಿ ಪರಿಗಣಮಿಸಿದೆ. ನೆರೆಯ ದೇಶವಾದ ಮ್ಯಾನ್ಮಾರ್‌ನಿಂದ ಬಾಂಗ್ಲಾಕ್ಕೆ ಲಕ್ಷಾಂತರ ಯಾಬಾ ಮಾದಕದ್ರವ್ಯದ ಗುಳಿಗೆಗಳು ಕಳ್ಳಸಾಗಣಿಕೆಯಾಗುತ್ತಿವೆ ಎನ್ನಲಾಗಿದೆ. ಬಾಂಗ್ಲಾ ಪೊಲೀಸರು ಈ ತನಕ 4 ಕೋಟಿಗೂ ಅಧಿಕ ಯಾಬಾ ಗುಳಿಗೆಗಳನ್ನು ವಶಪಡಿಸಿಕೊಂಡಿದ್ದಾರಾದರೂ, ಮಾರುಕಟ್ಟೆಗೆ ಈಗಾಗಲೇ 25-30 ಕೋಟಿಯಷ್ಟು ಯಾಬಾ ಗುಳಿಗೆಗಳು ಪ್ರವೇಶಿಸಿವೆಯೆಂದು ಪೊಲೀಸರು ಹೇಳಿದ್ದಾರೆ.







