ತಂಬಾಕು ಚಟ ಜೀವಕ್ಕೆ ಅಪಾಯ: ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿಬಾಳೇಕುಂದ್ರಿ ಆತಂಕ
ವಿಶ್ವ ತಂಬಾಕು ದಿನ
ಬೆಂಗಳೂರು, ಮೇ 29: ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಂಬಾಕಿನ ಚಟಕ್ಕೆ ಹೆಚ್ಚು ಬಲಿಯಾಗುತ್ತಿರುವ ಕಾರಣ, ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿಬಾಳೇಕುಂದ್ರಿ ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ದಿನ ಅಂಗವಾಗಿ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಆಯೋಜಿಸಿದ್ದ, ‘ಒಂದು ಮಿಲಿಯನ್ ಸಹಿ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಿಗೆ ತಂಬಾಕು ಉತ್ಪನ್ನಗಳನ್ನು ಬಳಸುವುದು ಫ್ಯಾಷನ್ ಆಗಿದೆ. ಆದರೆ, ತಂಬಾಕು ಪ್ರಾಣ ಹಾನಿ ಮಾಡಲಿದ್ದು, ಈ ಬಗ್ಗೆ ತಂಬಾಕು ಸೇವನೆ ಮಾಡುವವರು ಮನಗಾಣಬೇಕಿದೆ ಎಂದರು.
ತಂಬಾಕು ಸೇವನೆಯಿಂದ ಕ್ಯಾನ್ಸರ್ ಆವರಿಸುತ್ತದೆ. ಒಂದು ಬಾರಿ ಈ ಖಾಯಿಲೆಗೆ ತುತ್ತಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ, ಕ್ಯಾನ್ಸರ್‌ಗೆ ತುತ್ತಾದ ತಾನು ವ್ಯಕ್ತಿ ಮಾತ್ರ ಸಾಯದೆ ಆತನ ಕುಟುಂಬವನ್ನು ಸಾಯುವ ಪರಿಸ್ಥಿತಿಗೆ ತರಬೇಕಾಗುತ್ತದೆ ಎಂದು ಹೇಳಿದರು.
18-40 ವರ್ಷದೊಳಗಿನ ಯುವ ಜನಾಂಗವೇ ಈ ಮಾರಕ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಯಶ್ವಸಿಯಾಗಲು ಪ್ರತಿಯೊಬ್ಬರು ಸಿಗರೇಟು ಮತ್ತು ತಂಬಾಕು ಇತರೆ ಉತ್ಪನ್ನಗಳ ಸೇವೆನೆಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಕರೆ ನೀಡಿದರು.
ಕ್ರೀಡಾಪಟು ಅರ್ಜುನ್ ದೇವಯ್ಯ ಮಾತನಾಡಿ, ಯುವಜನತೆ ಬೀಡಿ-ಸಿಗರೇಟಿನಲ್ಲಿ ನಿಕೋಟಿನ್, ಕಾರ್ಬನ್, ಟಾರ್ ಇರುವುದರಿಂದ ಶ್ವಾಸಕೋಶಕ್ಕೆ ತೀವ್ರ ಹಾನಿಯುಂಟಾಗುವುದಲ್ಲದೆ, ಪ್ರಾಣಕ್ಕೂ ಹಾನಿಯಾಗುತ್ತದೆ ಎಂಬುದನ್ನು ಅರಿಯಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಲೋಕೇಶ್, ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ.ರಜನಿ ಉಪಸ್ಥಿತರಿದ್ದರು.







