ಹೀಗೆ ಮಾಡುವುದರಿಂದ ಡೆಂಗ್ ಹಾವಳಿ ತಡೆಗಟ್ಟಬಹುದಂತೆ!

ಲಂಡನ್,ಮೇ 29: ಜಾಗತಿಕ ತಾಪಮಾನವನ್ನು ಈಗಿರುವುದಕ್ಕಿಂತ 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಡಿಮೆಗೊಳಿಸಿದಲ್ಲಿ ವಿಶ್ವದಲ್ಲೇ ಅತಿ ವೇಗವಾಗಿ ಹರಡುವ ಉಷ್ಣವಲಯದ ಕಾಯಿಲೆಯಾದ ಡೆಂಗ್ ಜ್ವರದ ಮೂವತ್ತು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆಯೆಂದು ನೂತನ ಸಂಶೋಧನಾ ವರದಿಯೊಂದು ತಿಳಿಸಿದೆ.
ಬ್ರಿಟನ್‌ನ ಈಸ್ಟ್ ಆ್ಯಂಗ್ಲಿಯಾದ ಸಂಶೋಧಕರು ಕಂಪ್ಯೂಟರ್ ಮಾದರಿಗಳನ್ನು ಬಳಸಿ ನಡೆಸಿದ ಸಂಶೋಧನೆಯೊಂದರಲ್ಲಿ, ಭೂಮಿಯ ತಾಪಮಾನವನ್ನು ಸುಮಾರು 2 ಡಿಗ್ರಿ ಸೆಲ್ಸಿಯಸ್‌ಗೆ ಕಡಿತಗೊಳಿಸಿದಲ್ಲಿ, ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ದ್ವೀಪ ಪ್ರದೇಶಗಳಲ್ಲಿ ವಾರ್ಷಿಕವಾಗಿ ಡೆಂಗ್ ಪ್ರಕರಣಗಳ ಸಂಖ್ಯೆಯನ್ನು 28 ಲಕ್ಷದವರೆಗೆ ಕಡಿತಗೊಳಿಸಬಹುದಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಒಂದು ವೇಳೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿಸೆಂಟಿಗ್ರೇಡ್‌ವರೆಗೆ ಕಡಿತಗೊಳಿಸಿದಲ್ಲಿ ಇನ್ನೂ ಹೆಚ್ಚುವರಿಯಾಗಿ 5 ಲಕ್ಷ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ. ಇದರಿಂದಾಗಿ ದಕ್ಷಿಣ ಅಮೆರಿಕದ ಇತರ ಭಾಗಗಳಿಗೂ ಡೆಂಗ್ ಹಾವಳಿಯ ತಡೆಗೆ ಪ್ರಯೋಜನವಾಗಲಿದೆ. ಮಾನವನ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯಿಂದ ದುಷ್ಪರಿಣಾಮಗಳುಂಟಾಗುವ ಸಾಧ್ಯತೆಗಳ ಬಗ್ಗೆ ಜಗತ್ತಿನಾದ್ಯಂತ ಕಳವಳ ಹೆಚ್ಚುತ್ತಿದೆಯೆಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಕೊಲೊನ್ ಗೊನ್ಸಾಲೆಝ್ ಹೇಳಿದ್ದಾರೆ.
ಭೂಮಿಯ ತಾಪಮಾನವನ್ನು 2 ಸೆಂಟಿಗ್ರೇಡ್‌ನಿಂದ 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಡಿಮೆಗೊಳಿಸುವುದರಿಂದ ಜಗತ್ತಿನ ಜನರ ಆರೋಗ್ಯಕ್ಕೆ ಅಪಾರ ಪ್ರಯೋಜನವಾಗಲಿದೆಯೆಂಬುದನ್ನು ಈ ಅಧ್ಯಯನವು ಇದೇ ಮೊದಲ ಬಾರಿಗೆ ಸಾಬೀತುಪಡಿಸಿದೆಯೆಂದು ಫೆಲಿಪ್ ಕೊಲೊನ್ ಹೇಳಿದ್ದಾರೆ.







