ನಗದು, ವಸ್ತುಗಳನ್ನು ಹಂಚಲು ಅನುಮತಿ ನೀಡಲು ಚುನಾವಣೆ ಆಯೋಗಕ್ಕೆ ರವಿಕೃಷ್ಣಾ ರೆಡ್ಡಿ ಮನವಿ
ಬೆಂಗಳೂರು, ಮೇ 29: ಜಯನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ನಗದು, ವಸ್ತುಗಳನ್ನು ಹಂಚುವ ಅಕ್ರಮ ಅತಿಯಾಗಿದೆ. ಆದಕಾರಣ ಚುನಾವಣಾ ಆಯೋಗವೇ ಅಧಿಕೃತವಾಗಿ ಹಂಚಲು ಅನುಮತಿ ನೀಡಬೇಕೆಂದು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಂಗಳವಾರ ಜಯನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ಅಕ್ರಮಗಳನ್ನು ತಡೆಯಲು ವಿಫಲವಾಗಿದೆ. ಆಮಿಷ ಬಯಸುವ ಮತದಾರರಿಗೆ 2,888 ರೂ. ನಗದು, ಕುಕ್ಕರ್, ನಿಕ್ಕರ್, ಸೀರೆ ಹಂಚಲು ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.
ಚುನಾವಣೆ ಆಯೋಗವು ಜೂನ್ 1ರೊಳಗೆ ಈ ಬಗ್ಗೆ ಸ್ಪಂದಿಸದಿದ್ದರೆ ಆಯೋಗದ ವೌನವನ್ನೇ ಸಮ್ಮತಿ ಎಂದು ಪರಿಗಣಿಸಿ ಜೂ.2ರಂದು ಆಮಿಷ ಬಯಸುವ ಮತದಾರರಿಗೆ ಉಡುಗೊರೆ ನೀಡಲಾಗುವುದು ಎಂದು ರವಿಕೃಷ್ಣಾರೆಡ್ಡಿ ಪ್ರಕಟಿಸಿದರು.
ಉಡುಗೊರೆ: ಕೆಲ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿವೆ. ಕ್ಷೇತ್ರದಲ್ಲಿ ಆಮಿಷ ಬಯಸುವವರಿಗೆ ನಾವು ಹಣ, ಇತರೆ ಉಡುಗೊರೆ ಹಂಚಲು ಅನುಮತಿ ಕೋರಿ ಆಯೋಗಕ್ಕೆ ಮನವಿ ಮಾಡಲಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಎಲ್ಲ ನೋಟು, ನಾಣ್ಯಗಳನ್ನು ಒಟ್ಟುಗೂಡಿಸಿದರೆ 2,888 ರೂ. ಆಗಲಿದ್ದು, ಅಷ್ಟು ನಗದು ನೀಡುವುದು. ಜತೆಗೆ ಒಂದು ಕುಕ್ಕರ್, ಒಂದು ನಿಕ್ಕರ್, ಒಂದು ಸೀರೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಅನುಮತಿ ಕೋರಿ ಕೇಂದ್ರ ಚುನಾವಣಾ ಆಯುಕ್ತರು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದಿಂದ ಮೇ 10ರವರೆಗೆ 87 ಕೋಟಿ ರೂ. ನಗದು, 24 ಕೋಟಿ ರೂ. ವೌಲ್ಯದ ಮದ್ಯ, 110 ಕೋಟಿ ರೂ. ಚಿನ್ನ- ಬೆಳ್ಳಿ ವಸ್ತುಗಳು, 39 ಲಕ್ಷ ರೂ. ವೌಲ್ಯದ ಕಂಪ್ಯೂಟರ್ ಇತರೆ ಗೃಹ ಬಳಕೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ. ಆದರೆ, ಇದಕ್ಕಿಂತಲೂ ಬಾರಿ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಮೇ 7ರಂದು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 25 ಸಾವಿರ ಕುಕ್ಕರ್ ಜಪ್ತಿಯಾಗಿದ್ದು, ನಂತರ ಅದು ಕಾಂಗ್ರೆಸ್ ಅಭ್ಯರ್ಥಿ ಹಂಚಿಕೆಗೆ ತಂದಿದ್ದು ಎಂದು ವರದಿಯಾಗಿದೆ. ಪಕ್ಕದ ಬಿಟಿಎಂ ಲೇಔಟ್ ಕ್ಷೇತ್ರದಲ್ಲೂ ದೇವಸ್ಥಾನ, ಮನೆ ಪೂಜೆಗೆಂದು ಮಹಿಳೆಯರನ್ನು ಕರೆಸಿ ಮೂಗುತಿ ಹಂಚಿದ್ದಾರೆ ಎಂದು ದೂರಿದರು.
ಮತದಾನ ದಿನ ಸೇರಿದಂತೆ ಚುನಾವಣೆ ಘೋಷಣೆಯಾದ ದಿನದಿಂದ ಮತದಾರರಿಗೆ ಕುಕ್ಕರ್, ಸೀರೆ, ಮಾಂಸದೂಟ, ಮೂಗುತಿ ಇತರೆ ಉಡುಗೊರೆಗಳನ್ನು ಹಂಚಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 5 ಕೋಟಿ ರೂ. ಖರ್ಚು ಮಾಡದೆ ಗೆದ್ದವರಿಲ್ಲ ಎಂದು ಪರಾಜಿತ ಅಭ್ಯರ್ಥಿಗಳೇ ಹೇಳುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಭಾರಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.
ನೀತಿ ಸಂಹಿತೆ ಉಲ್ಲಂಘನೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಕೆ.ಬಾಗೇಗೌಡ, ರಾಜ್ಯಸಭಾ ಮಾಜಿ ಉಪಸಭಾಪತಿ ಕೆ.ರೆಹಮಾನ್ ಖಾನ್, ಮಾಜಿ ಸಚಿವರಾದ ಅಂಬರೀಷ್, ಎನ್.ಚೆಲುವರಾಯಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಮೇಯರ್ ಎಸ್.ಕೆ.ನಟರಾಜ್ ಇತರರು ಇಲ್ಲಿದ್ದಾರೆ.
ಆದರೆ, ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಸಂಚರಿಸುವಾಗ ಸರಕಾರಿ ವಾಹನ ಬಳಸಬಾರದು. ಹಾಗೆಯೇ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಾವಲು ಪಡೆಯೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ಆರೋಪಿಸಿದರು.







