ಬೆಂಗಳೂರು: ಮೊಬೈಲ್ ಮೂಲಕವೆ ಬಸ್‌ಪಾಸ್ ಸೇವೆಗೆ ಚಾಲನೆ
ಬಿಎಂಟಿಸಿಯ ಈ ಸೇವೆ ದೇಶದಲ್ಲೆ ಮೊದಲು

ಬೆಂಗಳೂರು, ಮೇ 29: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ದಿನದ ಪಾಸನ್ನು ಮೊಬೈಲ್ ಮೂಲಕವೆ ಖರೀದಿಸುವ ವ್ಯವಸ್ಥೆಯನ್ನು ಕಾಡುಗೋಡಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದು, ಇದರೊಂದಿಗೆ ಈ ವಿನೂತನ ವ್ಯವಸ್ಥೆ ಪರಿಚಯಿಸಿದ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.
ದಿನದ ಪಾಸನ್ನು ಮನೆಯಲ್ಲೆ ಕುಳಿತು ಪಡೆಯಬಹುದಾಗಿದ್ದು, ತಮ್ಮ ಮೊಬೈಲ್‌ಗಳಲ್ಲಿ ನಮ್ಮ ಆ್ಯಪ್ ಲಿಂಕ್ ಕ್ಲಿಕ್ ಮಾಡಿ, ತಮ್ಮ ಗುರುತಿನ ಚೀಟಿ ಒಂದರ ಸಂಖ್ಯೆ ನಮೂದಿಸಿ, ಮೊಬೈಲ್ ಸಂಖ್ಯೆ ಮತ್ತು ಪ್ರಯಾಣಿಕರ ಹೆಸರು ಟೈಪ್ ಮಾಡಿ ಹಣ ಪಾವತಿಸಿದ ತಕ್ಷಣ ಡಿಜಿಟಲ್ ಟಿಕೆಟ್ ಸೃಷ್ಟಿಯಾಗುತ್ತದೆ. ಅದನ್ನು ಬಸ್‌ನ ನಿರ್ವಾಹಕನಿಗೆ ತೋರಿಸಿದರೆ, ಅವರು ಸಂಸ್ಥೆ ನೀಡಿದ ಗುರುತಿನ ಸಂಖ್ಯೆ ಹಾಕಿ ದೃಢೀಕರಿಸುತ್ತಾರೆ. ಮೂರು ತಿಂಗಳ ಪ್ರಾಯೋಗದ ನಂತರ ಎಲ್ಲ ಕಡೆ ಸೇವೆ ವಿಸ್ತರಿಸಲಾಗುವುದು. ಪಾಸುಪಡೆಯುವ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲು ಚಿಂತನೆ ನಡೆಯುತ್ತಿದ್ದು, ಕೇವಲ ಮೊಬೈಲ್ ನಂಬರ್ ನಮೂದಿಸಿ ಪಾಸು ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಜೋಡಣೆ ಮಾಡಿದ ಮಾಹಿತಿ ನೀಡುವಂತೆ ಭಾರತೀಯ ವಿಶೇಷ ಗುರುತಿನ ಸಂಖ್ಯೆ ಪ್ರಾಧಿಕಾರಕ್ಕೆ ಮನವಿ ಮಾಡಲು ಚಿಂತನೆ ನಡೆಸಲಾಗಿದೆ.
ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ https://nammapass.series-5.com ಎಂದು ಟೈಮ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ತಕ್ಷಣ ‘ನಮ್ಮ ಪಾಸ್’ ಪುಟ ತೆರೆಯುತ್ತದೆ. ಅಲ್ಲಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಟೈಪ್ ಮಾಡಬೇಕು. ನಂತರ ಮತದಾರರ ಗುರುತಿನಚೀಟಿ ಸಂಖ್ಯೆ, ಪಾನ್‌ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಚಾಲನಾ ಪರವಾನಗಿ ಸಂಖ್ಯೆ ಇವುಗಳಲ್ಲಿ ಯಾವುದಾದರು ಒಂದನ್ನು ಕ್ಲಿಕ್ ಮಾಡಿ, ಆ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು. ನಂತರ ‘ಪೇ ನೌ’ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿದರೆ ಪಾಸು ಲಭ್ಯ.







