ಬಂಟ್ವಾಳ: ಬಸ್ ನಲ್ಲಿ ಸಿಕ್ಕ ಬಂಗಾರದ ಒಡವೆಯನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರದ ಯುವಕ

ಬಂಟ್ವಾಳ, ಮೇ 29: ಬಸ್ ನಲ್ಲಿ ಸಿಕ್ಕ ಬಂಗಾರದ ಒಡವೆಯನ್ನು ವಾಟ್ಸ್ಆ್ಯಪ್ ನೆರವಿನ ಮೂಲಕ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರದ ಘಟನೆ ಮಂಗಳವಾರ ಬಂಟ್ವಾಳದಲ್ಲಿ ನಡೆದಿದೆ.
ಇತ್ತೀಚೆಗೆ ಉಪ್ಪಿನಂಗಡಿಯ ನಿವಾಸಿ ಪಾವನ ಕುಮಾರಿ ಎಂಬವರು ಕೆಲಸ ಮುಗಿಸಿ ಮಂಗಳೂರುನಿಂದ ಪುತ್ತೂರು ಕಡೆಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ತನ್ನ ಕೈಯಲ್ಲಿದ ಸುಮಾರು 20 ಸಾವಿರ ರೂ. ಮೌಲ್ಯದ 6 ಗ್ರಾಂ ತೂಕವಿದ್ದ ಚಿನ್ನದ ಬ್ರೆಸ್ ಲೈಟ್ ನ್ನು ಕಳೆದುಕೊಂಡಿದ್ದರು. ಅದರ ಬಳಿಕ ಬ್ರೆಸ್ ಲೈಟ್ ಗಾಗಿ ಬಸ್ ಸಹಿತ ಹೋದ ಕಡೆ ಎಲ್ಲ ಹುಡುಕಾಟ ನಡೆಸಿದ್ದಾರೆ. ತದನಂತರ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಮಾಹಿತಿಯನ್ನು ಹಾಕುವ ಮೂಲಕ ಪತ್ತೆಗೆ ಮನವಿ ಮಾಡಿಕೊಂಡಿದ್ದರು.
ಅಂದು ಅದೇ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದ ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಇಬ್ರಾಹಿಂ ಎಂಬವರಿಗೆ ಈ ಬ್ರಾಸ್ ಲೈಟ್ ಸಿಕ್ಕಿತ್ತು. ಈ ಬಗ್ಗೆ ಇಬ್ರಾಹಿಂ ಅವರು ತನ್ನ ಸ್ನೇಹಿತನ ಬಳಿ ವಿಷಯ ತಿಳಿಸಿದ್ದರು. ತದ ನಂತರ ತನ್ನ ಸ್ನೇಹಿತನ ವಾಟ್ಸ್ಆ್ಯಪ್ ಗ್ರೂಪ್ ನ ಮೂಲಕ ಈ ಮಾಹಿತಿಯನ್ನು ಪಡೆದು ಪೋನ್ ಮೂಲಕ ಮಾಲಕರನ್ನು ಸಂಪರ್ಕಿಸಿ, ವಾರಸುದಾರರನ್ನು ಬಂಟ್ವಾಳ ನಗರ ಠಾಣೆಗೆ ಕರೆಸಿ ಅಪರಾಧ ವಿಭಾಗದ ಎಸ್ಸೈ ಹರೀಶ್ ಅವರ ಸಮ್ಮುಖದಲ್ಲಿ ಮಾಲಕರಿಗೆ ಚಿನ್ನವನ್ನು ನೀಡುವ ಮೂಲಕ ಇಬ್ರಾಹಿಂ ಅವರು ಪ್ರಮಾಣಿಕತೆ ಮೆರೆದಿದ್ದಾರೆ. ಇಬ್ರಾಹಿಂ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.







