ಮಳೆಯಿಂದ ದ.ಕ.ದಲ್ಲಿ ಅಂದಾಜು 20.74 ಕೋಟಿ ರೂ.ನಷ್ಟ: ಜಿಲ್ಲಾಧಿಕಾರಿ

ಮಂಗಳೂರು, ಮೇ 30: ದ.ಕ. ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಮಳೆಗೆ ಇಬ್ಬರು ಪ್ರಾಣವನ್ನು ಕಳೆದುಕೊಂಡಿದ್ದು, ಮನೆಹಾನಿ, ಇತರ ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಒಟ್ಟು 20.74 ಕೋಟಿ ರೂ.ಗಳ ನಷ್ಟವನ್ನು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮಳೆ ಹಾನಿ ಕುರಿತಂತೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿನ್ನೆ ಸುಮಾರು ಆರು ಗಂಟೆ ಅವಧಿಯಲ್ಲಿ ಮಂಗಳೂರಿನಲ್ಲಿ 368 ಮಿಲಿಮೀಟರ್ ಮಳೆಯಾಗಿದೆ. ಸರಾಸರಿಯಾಗಿ 156.8 ಮಿ.ಮೀ. ಮಳೆಯಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ರಸ್ತೆ ಮತ್ತು ಸೇತುವೆಗಳು, ಖಾಸಗಿ ಕಟ್ಟಡಗಳು, ಇಲೆಕ್ಟ್ರಿಕಲ್ ನಷ್ಟ ಸೇರಿ ಒಟ್ಟು 16.63 ಕೋಟಿ ರೂ. ಹಾಗೂ 560 ಮನೆಗಳಿಗೆ ಹಾನಿಯಾಗಿ 4.11 ಕೋಟಿ ರೂ. ನಷ್ಟ ಸಂಭವಿಸಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 35 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಇದರಲ್ಲಿ ಮಂಗಳೂರು ತಾಲೂಕಿನಲ್ಲಿಯೇ 30 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಈ ಮನೆಗಳ ನಾಶದಿಂದ ಒಟ್ಟು 78.33 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ಒಟ್ಟು 42 ಮನೆಗಳು ಬಹುತೇಕವಾಗಿ ಹಾನಿಯಾಗಿದ್ದು, ಮಂಗಳೂರಿನಲ್ಲಿಯೇ 22 ಮನೆಗಳು ಬಹುತೇಕವಾಗಿ ಹಾನಿಗೊಳಗಾಗಿವೆ. 483 ಮನೆಗಳಿಗೆ ಸಣ್ಣಪುಟ್ಟ ತೊಂದರೆಗಳಾಗಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
ಸಂಪೂರ್ಣವಾಗಿ ನಾಶವಾದ ಮನೆಗಳಿಗೆ ಇಂದು ಹಾಗೂ ನಾಳೆಯೊಳಗೆ ಜಿಲ್ಲಾಡಳಿತದ ವತಿಯಿಂದ ಪರಿಹಾರ ಮೌಲ್ಯವನ್ನು ವಿತರಿಸಲಾಗುವುದು. ಉಳಿದಂತೆ ಬಹುತೇಕವಾಗಿ ಹಾನಿಗೊಳಗಾದ ಹಾಗೂ ಸಣ್ಣಪುಟ್ಟ ತೊಂದರೆಗಳಾದ ಮನೆಗಳಿಗೆ ಸಮರ್ಪಕ ಪರಿಶೀಲನೆಯೊಂದಿಗೆ ಪರಿಹಾರ ವಿತರಣೆ ನಡೆಸಲಾಗುವುದು ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಜೂನ್ 1ರಿಂದ ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಬೇಕಾಗಿತ್ತು. ಆದರೆ ವಾಯುಭಾರ ಕುಸಿತದಿಂದ ನಿನ್ನೆಯೇ ಮುಂಗಾರು ಆಗಮನವಾಗಿದೆ. ಮುಂಗಾರನ್ನು ಎದುರಿಸಲು ಒಂದು ತಿಂಗಳ ಮುಂಚಿತವಾಗಿಯೇ ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿತ್ತು. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸರಾಸರಿ 150 ಮಿ.ಮೀ. ಮಳೆಯಾಗುತ್ತದೆ. ಈ ಹಿಂದೆಯೂ ಈ ಪ್ರಮಾಣದ ಮಳೆಯನ್ನು ಎದುರಿಸಲಾಗಿದೆ. ಆದರೆ ನಿನ್ನೆ ವಾಯುಭಾರ ಕುಸಿತದಿಂದಾಗಿ ಸಾಮಾನ್ಯ ವಾಗಿಯೇ ಆತಂಕಕ್ಕೆ ಕಾರಣವಾಯಿತು. ಸತತ ಆರು ಗಂಟೆಗಳ ಕಾಲ ಸುರಿದ ಭಾರೀ ಪ್ರಮಾಣದ ಮಳೆಯನ್ನು ಮುಂಚಿತವಾಗಿ ಗ್ರಹಿಸಲೂ ಅಸಾಧ್ಯವಾದ ಕಾರಣ ನಗರದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಯಿತು.
ನಿನ್ನೆ ಬೆಳಗ್ಗಿನ ಅವಧಿಯಲ್ಲಿ ಫಲ್ಗುಣಿ ನದಿ ಮತ್ತು ನೇತ್ರಾವತಿ ನದಿಯಲ್ಲಿ ನೀರಿನ ಉಬ್ಬರವಿದ್ದ ಕಾರಣ, ಮಳೆ ನೀರು ನದಿಗಳನ್ನು ಸೇರಲು ಸಾಧ್ಯವಾಗದೆ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಸಂಜೆಯ ವೇಳೆಗೆ ನದಿಗಳಲ್ಲಿ ನೀರಿನುಬ್ಬರ ಕಡಿಮೆಯಾಗಿ ಮಳೆ ನೀರು ಹರಿದುಹೋಗಲು ಸಾಧ್ಯವಾಗಿದೆ. ಜಿಲ್ಲಾಡಳಿತ ಅದಾಗಲೇ ಮುಂಗಾರು ಎದುರಿಸಲು ಸನ್ನದ್ಧವಾಗಿದ್ದ ಕಾರಣ ಬೋಟ್ ಸೇರಿದಂತೆ ಇತರ ವ್ಯವಸ್ಥೆಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ನಗರದಲ್ಲಿ ತುರ್ತು ಸ್ಪಂದನೆಗಾಗಿ 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.
ರಾಜಕಾಲುವೆಗಳ ಒತ್ತುವರಿಯಾಗಿದ್ದಲ್ಲಿ ತೆರವಿಗೆ ದಿಟ್ಟ ಕ್ರಮ
ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ನಗರದಲ್ಲಿ ರಾಜಕಾಲುವೆಗಳ ಒತ್ತುವರಿ, ಹೂಳು ತುಂಬಿರುವುದನ್ನು ಪರಿಶೀಲನೆ ನಡೆಸಲು ಮೂಡಾ ಆಯುಕ್ತರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈ ತಂಡ ಪ್ರಥಮವಾಗಿ ನಗರದ ಪ್ರಮುಖ ರಾಜಕಾಲುವೆಗಳಾದ ಕೊಟ್ಟಾರ ಚೌಕಿಯಿಂದ ಗುರುಪುರದ ಫಲ್ಗುಣಿ ನದಿಯನ್ನು ಸೇರುವಲ್ಲಿ ಹಾಗೂ ಜಪ್ಪುವಿನಿಂದ ನೇತ್ರಾವತಿ ನದಿ ಸೇರುವ ರಾಜಕಾಲುವೆಗಳ ಪರಿಶೀಲನೆ ನಡೆಸಿ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದೆ. ಯಾವುದೇ ರೀತಿಯಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸಲು ಯಾವುದ ಮುಲಾಜಿಲ್ಲದೆ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಿನ್ನೆ ಸುರಿದ ಮಳೆ ಐತಿಹಾಸಿಕ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಈ ಮಳೆಯ ಅಂಕಿಅಂಶಗಳ ಆಧಾರದಲ್ಲೇ ಮುಂಗಾರು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.







