ಸುಬ್ರಮಣಿಯನ್ ಸ್ವಾಮಿ ಮೊದಲು ತಮ್ಮನ್ನು ವಿಚಾರಣೆಗೊಳಪಡಿಸಬೇಕು ಎಂದ ನ್ಯಾಯಾಲಯ
ನ್ಯಾಷನಲ್ ಹೆರಾಲ್ಡ್ ಪ್ರಕರಣ

ಹೊಸದಿಲ್ಲಿ, ಮೇ 30: ವಕೀಲ ಹಾಗೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ “ಪ್ರಾಸಿಕ್ಯೂಶನ್ ನ ಪ್ರಥಮ ಸಾಕ್ಷಿಯಾಗಿ ಮೊದಲು ತಮ್ಮನ್ನು ವಿಚಾರಣೆಗೊಳಪಡಿಸಬೇಕು'' ಎಂದು ದಿಲ್ಲಿ ನ್ಯಾಯಾಲಯ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತ್ತಿತರ ನಾಲ್ಕು ಮಂದಿಯ ವಿರುದ್ಧ ವಂಚನೆಯ ಆರೋಪ ಹೊರಿಸಿರುವ ಪ್ರಕರಣ ಇದಾಗಿದೆ. ಈ ನಾಯಕರು ಕೇವಲ 50 ಲಕ್ಷ .ರೂ ಪಾವತಿಸಿ ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ನೀಡಬೇಕಿದ್ದ 90.25 ಕೋಟಿ ರೂ. ವಸೂಲಿ ಮಾಡುವ ಅಧಿಕಾರವನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಗೆ ನೀಡಿದ್ದರೆಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.
ವಿಚಾರಣೆ ವಿಳಂಬವಾಗಿರುವುದರಿಂದ ಹಾಗೂ ಅದನ್ನು ಮತ್ತೆ ಸೂಕ್ತ ಹಾದಿಯಲ್ಲಿ ತರಬೇಕಿರುವುದರಿಂದ ಸ್ವಾಮಿ ಅವರೇ ಮೊದಲು ತಮ್ಮನ್ನು ವಿಚಾರಣೆಗೆ ಗುರಿಪಡಿಸಬೇಕಿದೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು. ತದನಂತರ ಈ ಪ್ರಕರಣದ ಸಾಕ್ಷಿಗಳಿಗೆ ಸಮನ್ಸ್ ಕಳುಹಿಸಿ ಸ್ವಾಮಿ ಈ ಪ್ರಕರಣವನ್ನು ಸಾಬೀತು ಪಡಿಸಲು ಪ್ರಸ್ತುತ ಪಡಿಸಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ಸಾಬೀತು ಪಡಿಸಲಾಗುವುದು ಎಂದರು.
ಸ್ವಾಮಿ ಮೊದಲಿಗೆ ಸಾಕ್ಷಿಗಳ ಹೆಸರುಗಳು, ಹುದ್ದೆಗಳ ಪಟ್ಟಿ ಹಾಗೂ ಅವರು ಸಾಬೀತು ಪಡಿಸಲೆತ್ನಿಸುವ ದಾಖಲೆಗಳ ಬಗ್ಗೆ ವಿವರ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಸ್ವಾಮಿ ಆಗಾಗ ದಾಖಲೆಗಳನ್ನು ಸಲ್ಲಿಸುತ್ತಿರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಹೇಳಿದ ನ್ಯಾಯಾಲಯ, ದಾಖಲೆಯ ನಕಲುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಗಳಲ್ಲೊಂದನ್ನು ವಜಾಗೊಳಿಸಿದೆ.
ತಮ್ಮ ವಾದದ ಸಮರ್ಥನೆಗಾಗಿ ಸ್ವಾಮಿ ಹಾಜರುಪಡಿಸಿರುವ ದಾಖಲೆಗಳನ್ನು ಆರೋಪಿಗಳು ವಿರೋಧಿಸಿದ್ದಾರೆ ಹಾಗೂ ವಿಚಾರಣೆಯನ್ನು ವಿಳಂಬಿಸುವ ಉದ್ದೇಶದಿಂದ ಸಲ್ಲಿಸಲಾಗಿರುವ ಕೆಲವೊಂದು ದಾಖಲೆಗಳು ಮೂಲ ದಾಖಲೆಗಳಾಗಿಲ್ಲ ಹಾಗೂ ದೃಢೀಕೃತ ದಾಖಲೆಗಳೂ ಆಗಿಲ್ಲ ಎಂದು ಪ್ರತಿವಾದಿಗಳು ಹೇಳಿದ್ದರು.







