ಗೌರಿ ಲಂಕೇಶ್ ಹತ್ಯೆ ಪ್ರಕರಣ: 131 ಸಾಕ್ಷಿ, 651 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು, ಮೇ 30: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು 131 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿರುವ 650 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್‌ಐಟಿ ಜಾರ್ಜ್‌ಶೀಟ್ ಸಲ್ಲಿಸಿದೆ. ಪ್ರಕರಣದ ಆರೋಪಿ ಎನ್ನಲಾದ ಹೊಟ್ಟೆ ಮಂಜ ಯಾನೆ ನವೀನ್‌ಕುಮಾರ್, ಹಂತಕರಿಗೆ ಗೌರಿ ಲಂಕೇಶ್ ಅವರ ಮನೆ ಹಾಗೂ ಕಚೇರಿ ತೋರಿಸಿದ್ದ. ಹಂತಕರ ಬಗ್ಗೆ ಆತನಿಗೆ ಪೂರ್ಣ ಮಾಹಿತಿ ಇದ್ದರೂ, ಹಂತಕರ ಹೆಸರುಗಳನ್ನು ಆತ ಹೇಳುತ್ತಿಲ್ಲ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸ್ನೇಹಿತರ ಬಳಿ ಹೇಳಿದ?: ಸಿಟ್ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ನವೀನ್ ಕುಮಾರ್ ಮತ್ತು ಪ್ರವೀಣ್ ಎಂಬಾತನ ವಿರುದ್ಧ ಆರೋಪವಿದ್ದು, ಗೌರಿ ಹತ್ಯೆಗೂ ಮೊದಲು ಕೆಲ ದಿನಗಳಿಂದ ಊರಿನಿಂದ ಹೊರಗೆ ಹೋಗಿದ್ದ ನವೀನ್ ಕುಮಾರ್ ಆ ನಂತರ ಊರಿಗೆ ಮರಳಿದ್ದ.
ಈ ವೇಳೆ ಸ್ನೇಹಿತರ ಬಳಿ ಗೌರಿ ಹತ್ಯೆಯಲ್ಲಿ ಭಾಗಿಯಾಗಿದ್ದೆ ಎಂಬ ವಿಚಾರಗಳನ್ನು ಚರ್ಚಿಸಿದ್ದ. ಇನ್ನೂ ಎರಡು ಗುರಿಗಳಿದ್ದು ಅವುಗಳನ್ನು ಮತ್ತಿಬ್ಬರಿಗೆ ವಹಿಸಲಾಗಿದೆ ಎಂದು ಸ್ನೇಹಿತರ ಬಳಿ ನವೀನ್ ಕುಮಾರ್ ಹೇಳಿಕೊಂಡಿದ್ದ ಎಂಬ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ನವೀನ್‌ಕುಮಾರ್ ಸ್ನೇಹಿತರ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ.







