ಮೇ.31 ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಫಲಿತಾಂಶ
ರಾಜ್ಯ ವಿಧಾನಸಭಾ ಚುನಾವಣೆ

ಬೆಂಗಳೂರು, ಮೇ 30: ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ನಾಳೆ (ಮೇ 31) ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
ರಾಜ್ಯ ರಾಜಕೀಯ ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಮೇ 28 ರಂದು ಮತದಾನ ನಡೆದಿತ್ತು. ಮತಯಂತ್ರಗಳನ್ನು ಹಲಗೇವಡೇರಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಇರಿಸಲಾಗಿದ್ದು, ನಾಳೆ ಬೆಳಗ್ಗೆ ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕಾಂಗ್ರೆಸಿನ ಮುನಿರತ್ನ, ಬಿಜೆಪಿಯ ಮುನಿರಾಜುಗೌಡ ಹಾಗೂ ಜೆಡಿಎಸ್‌ನ ರಾಮಚಂದ್ರ ಸೇರಿದಂತೆ 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮೈತ್ರಿಕೂಟ ಸರಕಾರ ಆಡಳಿತಕ್ಕೆ ಬಂದ ಬಳಿಕ ನಡೆದ ಮೊದಲ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ನಾಳೆ ಬೆಳಗ್ಗೆ ಭದ್ರತಾ ಕೊಠಡಿಯಿಂದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಎಣಿಕಾ ಕೇಂದ್ರಕ್ಕೆ ತರಲಾಗುವುದು. ಮತ ಎಣಿಕೆ ವೇಳೆ ಒಂದು ವಿವಿಪ್ಯಾಟ್ ತೆರೆದು ಕಂಟ್ರೊಲ್ ಯೂನಿಟ್‌ನಲ್ಲಿರುವ ಮತಗಳೊಂದಿಗೆ ತಾಳೆ ಮಾಡಲಾಗುವುದು. ಎಣಿಕಾ ಕೇಂದ್ರ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತೀವ್ರ ಜಿದ್ದಾಜಿದ್ದಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಮತ್ತು ಚುನಾವಣಾ ಫಲಿತಾಂಶ ಪ್ರಕಟಿಸಿದ ಬಳಿಕ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನಚ್ಚರಿಕೆ ಕ್ರಮವಾಗಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.







