ಕಿನ್ನಿಮೂಲ್ಕಿ: ನವೀಕೃತ ಸ್ವಾಗತಗೋಪುರ ಲೋಕಾರ್ಪಣೆ

ಉಡುಪಿ, ಮೇ 30: ಉಡುಪಿಯ ಹೆಗ್ಗುರುತಾಗಿ ಗುರುತಿಸಲ್ಪಡುವ ಹಾಗೂ ಕಿನ್ನಿಮೂಲ್ಕಿ ಮೂಲಕ ನಗರಕ್ಕೆ ಆಗಮಿಸುವ ಭಕ್ತರನ್ನು ಸ್ವಾಗತಿಸುವ ಅತ್ಯಾಕರ್ಷಕವಾದ ಇದೀಗ ನವೀಕೃತಗೊಂಡ ಸ್ವಾಗತಗೋಪುರವನ್ನು ಬುಧವಾರ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥಶ್ರೀ ಉದ್ಘಾಟಿಸಿದರು.
ಸ್ವಾಗತಗೋಪುರದಲ್ಲಿ 37 ಭಾಗವತ ಕಥೆಯ ಮೂರ್ತಿಗಳನ್ನು ಚಿತ್ರಿಸಲಾಗಿದೆ. ರಥದಲ್ಲಿರುವ ಕೃಷ್ಣ ಮತ್ತು ಅರ್ಜುನನ ಕಿರೀಟ ಕರಾವಳಿಯ ಯಕ್ಷಗಾನದ ಮಾದರಿಯಲ್ಲಿದ್ದು, ಉಡುಪಿಯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪುತ್ತಿಗೆಶ್ರೀಗಳು ಹೇಳಿದರು.
ಸುಂದರ ಸ್ವಾಗತಗೋಪುರ ಚತುಷ್ಪಥ ಕಾಮಗಾರಿ ಸಂದರ್ಭ ಯಾವುದೇ ಧಕ್ಕೆ ಉಂಟಾಗದಂತೆ ಉಳಿಸಿಕೊಳ್ಳಲು ಉಡುಪಿ ಮಾಜಿ ಸಂಸದ ಆಸ್ಕರ್ ಫೆರ್ನಾಂಡಿಸ್ ಹಾಗೂ ಮಾಜಿ ಗೃಹ ಸಚಿವ ದಿ. ಡಾ. ವಿಎಸ್ ಆಚಾರ್ಯ ಸತತ ಪ್ರಯತ್ನ ನಡೆಸಿದ್ದಾರೆ. ಅವರ ಸಹಾಯವನ್ನು ಇಲ್ಲಿ ಸ್ಮರಿಸುವುದು ಅವಶ್ಯ ಎಂದು ಶ್ರೀಗಳು ನುಡಿದರು.
ಶ್ರೀಪುತ್ತಿಗೆ ಶ್ರೀಗಳು ತಮ್ಮ ದ್ವಿತೀಯ ಪರ್ಯಾಯದ ಅವಧಿಯಲ್ಲಿ ತಮ್ಮ ಪರಮಗುರುಗಳಾದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥಶ್ರೀ ಸಂಸ್ಮರಣೆಯಾಗಿ ಈ ಸ್ವಾಗತಗೋಪುರವನ್ನು 25 ವರ್ಷಗಳ ಹಿಂದೆ ನಿರ್ಮಿಸಿದ್ದು, ಇದನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ 1993ರ ಮಾರ್ಚ್ 7ರಂದು ಲೋಕಾರ್ಪಣೆಗೊಳಿಸಿದ್ದರು.
ಇದೀಗ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಹಿನ್ನಲೆಯಲ್ಲಿ ಕಳಾಹೀನವಾಗಿದ್ದ ಈ ಸ್ವಾಗತಗೋಪುರವನ್ನು ವಿವಿಧ ದಾನಿಗಳ ನೆರವಿನಿಂದ ನವೀಕರಿಸಿ ಇನ್ನಷ್ಟು ಆಕರ್ಷಕಗೊಳಿಸಲಾಗಿದೆ. ಇದೀಗ ಮೇಲ್ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಗೋಪುರ ಮತ್ತೆ ಆಕರ್ಷಣೆಯ ಕೇಂದ್ರವಾಗಿದೆ. ಇಂದು ಸ್ವಾಗತಗೋಪುರವನ್ನು ಶ್ರೀ ಸುಗುಣೇಂದ್ರತೀರ್ಥ ಶ್ರಿೀಪಾದರು ಲೋಕಾರ್ಪಣೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಸಿಂಡಿಕೇಟ್ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ, ಹಿರಿಯ ಇಂಜಿನಿಯರ್ ರಮೇಶ್ ರಾವ್, ಕನ್ನರ್ಪಾಡಿ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಸಂತೋಷ್ ಶೆಟ್ಟಿ, ಪುತ್ತಿಗೆ ಮಠದ ದಿವಾನರಾದ ಮುರಳೀಧರಾಚಾರ್ಯ ಮತ್ತು ನಾಗರಾಜಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ವಿದ್ವಾನ್ ಬಿ.ಗೋಪಾಲಾಚಾರ್ಯರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







