ಮಂಚಿ ಗ್ರಾಮದ ನೂಜಿ-ಆಲಬೆಯ ಸಂಪರ್ಕ ಸೇತುವೆ ಕುಸಿತ

ಬಂಟ್ವಾಳ, ಮೇ 30: ಮಂಗಳವಾರ ಸುರಿದ ಮಳೆಗೆ ಮಂಚಿ ಗ್ರಾಮದ ನೂಜಿ ಆಲಬೆಯಲ್ಲಿ ಕಾಲು ಸೇತುವೆಯೊಂದು ಮುರಿದು ಬಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ.
ಕಿರು ಸೇತುವೆಯ ಆಧಾರ ಸ್ಥಂಭ ಮುರಿದು ಬಿದ್ದಿದರುವುದರಿಂದ ಈ ಭಾಗದ ಸಂಪರ್ಕ ಕೊಂಡಿ ಕಳಚಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಈ ಸೇತುವೆಯನ್ನು ಅವಲಂಬಿಸಿದ್ದು, ಶೀಘ್ರ ಸೇತವೆ ಪುನರ್‌ನಿರ್ಮಿಸಿ ಕೊಡುವಂತೆ ಇಲ್ಲಿನ ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕ ಭೇಟಿ: ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಬುಧವಾರ ನೂಜಿಯ ಆಲಬೆಗೆ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಯವರು ಭೇಟಿ ನೀಡಿ, ಸಂಪರ್ಕ ಕೊಂಡಿ ಕಳಚಿರುವುದರಿಂದ ಗ್ರಾಮಸ್ಥರಿಗಾಗುವ ತೊಂದರೆಯನ್ನು ಅವಲೋಕಿಸಿದ್ದಾರೆ. ಶೀಘ್ರದಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಿಕೊಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಪ್ರಭಾಕರ ಪ್ರಭು, ಪಕ್ಷದ ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ದಿನೇಶ್ ಅಮ್ಟೂರು, ರಮೇಶ್ ರಾವ್, ಸಂತೋಷ್ ಗುಂಡಿಮಜಲು ಮೊದಲಾದವರು ಹಾಜರಿದ್ದರು.





