ಪಾದೆಬೆಟ್ಟು: ಮೃತ ನಿಧಿ ಮನೆಗೆ ಸಂಸದೆ ಶೋಭಾ ಭೇಟಿ

ಪಡುಬಿದ್ರೆ, ಮೇ 30: ಪಾದೆಬೆಟ್ಟು ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತ ಪಟ್ಟ ನಿಧಿ ಆಚಾರ್ಯರ ಮನೆಗೆ ಭೇಟಿ ನೀಡಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮನೆಮಂದಿಗೆ ಸಾಂತ್ವಾನ ಹೇಳಿದರು.
ಮನೆ ಹೊರಗಡೆ ಇರಿಸಿದ್ದ ಬಾಲಕಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದೆ, ತಂದೆ ಉಮೇಶ್ ಆಚಾರ್ಯ, ತಾಯಿ ಆಶಾ ಹಾಗೂ ಸಹೋದರಿ ನಿಶಾ ಅವರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯ ರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಳೆಯಿಂದ ತತ್ತರಿಸಿದ ಪಡುಬಿದ್ರೆ, ಹೆಜಮಾಡಿ, ಉದ್ಯಾವರ ಹಾಗೂ ಉಡುಪಿ ನಗರದ ಕಲ್ಸಂಕ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟ ಪರಿಹಾರದ ಬಗ್ಗೆ ಅವಲೋಕಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಕಾಲಿಕ ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿವೆ. ಎರಡು ಜೀವಗಳು ಬಲಿಯಾಗಿವೆ. ಸರಕಾರ ತಕ್ಷಣ ಈ ಕಡೆ ಧಾವಿಸಬೇಕು. ಆದರೆ ರಾಜ್ಯದಲ್ಲಿ ಸರಕಾರವೇ ಇಲ್ಲವಾಗಿದೆ. ಮಂತ್ರಿ ಸ್ಥಾನದ ಗೊಂದಲ, ಚರ್ಚೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಿರತವಾಗಿದೆ. ಅಧಿಕಾರಿಗಳು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು. ಹಾನಿಗೊಂಡಿರುವ ಮನೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.







