ಲಿಖಿತ ಭರವಸೆ ನೀಡದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ-ಪ್ರಮೋದ್
8ನೇ ದಿನಕ್ಕೆ ಅಂಚೆ ನೌಕರರ ಅನಿರ್ದಿಷ್ಠಾವಧಿ ಮುಷ್ಕರ

ಪುತ್ತೂರು, ಮೇ 30: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರಿನ ಪ್ರಧಾನ ಅಂಚೆ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಮೇ 22ರಿಂದ ಗ್ರಾಮೀಣ ಅಂಚೆ ನೌಕರರು ಹೋರಾಟ ನಡೆಸುತ್ತಿದ್ದು, ಕಮಲೇಶ್ಚಂದ್ರ ವರದಿ ಜಾರಿ, ಗ್ರಾಮೀಣ ಅಂಚೆ ನೌಕರರ ಬಗೆಗಿನ ನಿರ್ಲಕ್ಷ್ಯ ಧೋರಣೆ, ಕೇಂದ್ರ ಸರಕಾರಿ ನೌಕರರಿಗೆ ಸಿಗುವ ಸವಲತ್ತು ನಮಗೂ ಸಿಗಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಹೋರಾಟ ನಡೆಯುತ್ತಿದೆ.
ಬುಧವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯಾಧ್ಯಕ್ಷ ಪ್ರಮೋದ್ ಕುಮಾರ್ ಸರ್ಕಾರದಿಂದ ಬೇಡಿಕೆ ಈಡೇರಿಸುವ ಮೌಖಿಕ ಭರವಸೆ ದೊರೆತಿದೆ. ಆದರೆ ಲಿಖಿತ ಭರವಸೆ ನೀಡದೆ ನಾವು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ನಾವು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟ ಬಹುತೇಕ ಯಶಸ್ವಿಯಾಗಿದೆ. ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಿದೆ. ಹಾಗಿದ್ದರೂ ಈ ಬಗ್ಗೆ ಲಿಖಿತ ಭರವಸೆಯನ್ನು ನೀಡುವವರೆಗೆ ಹೋರಾಟ ಮುಂದುವರಿಯಲಿದೆ. ಜೂನ್ 1ರಿಂದ ಗ್ರಾಮೀಣ ಅಂಚೆ ನೌಕರರ ಜೊತೆಗೆ ಅಂಚೆ ಪೇದೆಗಳು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದರೂ ಬೇಡಿಕೆ ಈಡೇರುವ ಹಂತ ತಲುಪಿದ್ದರಿಂದ ಉಪವಾಸ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ಜೂನ್ ಒಂದರ ತನಕವೂ ಯಾವುದೇ ಲಿಖಿತ ಭರವಸೆ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪುತ್ತೂರು ವಿಭಾಗೀಯ ಘಟಕದ ಕಾರ್ಯದರ್ಶಿ ಸುನಿಲ್ ದೇವಾಡಿಗ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗೀಯ ಅಧ್ಯಕ್ಷ ವಿಠಲ ಎಸ್ ಪೂಜಾರಿ, ವಿಭಾಗೀಯ ಗೌರವಾಧ್ಯಕ್ಷ ಜಗತ್ಪಾಲ್ ಹೆಗ್ಡೆ, ಉಪವಿಭಾಗದ ಪ್ರಮುಖರಾದ ಅಬ್ದುಲ್ ಕಲಾಂ, ಶೇಸಪ್ಪ ಪುತ್ತೂರು,ತೀರ್ಥರಾಮ ಗೌಡ ,ಲಿಯೋ ಡಿ.ಸೋಜಾ,ಸಂತೋಷ್, ದಾಮೋದರ್ ಮತ್ತಿತರರು ಇದ್ದರು.







