ಬಿಬಿಎಂಪಿ ಮಾಸಿಕ ಸಭೆ: ನೂತನ ಸಮ್ಮಿಶ್ರ ಸರಕಾರಕ್ಕೆ ಅಭಿನಂದನೆ

ಬೆಂಗಳೂರು, ಮೇ 30: ರಾಜ್ಯ ವಿಧಾನ ಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಅಗಲಿದ ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಮೇಯರ್ ಸಂಪತ್‌ರಾಜ್ ನೂತನ ಸಮ್ಮಿಶ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿ, ಅಗಲಿದ ನಾಯಕರನ್ನು ಸ್ಮರಿಸಿದರು. ನಂತರ ಮಾತನಾಡಿದ ಅವರು, ಜಯನಗರದ ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್ ಎಲ್ಲರೊಂದಿಗೆ ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಜಯನಗರ ಕ್ಷೇತ್ರದ ಅಭಿವದ್ಧಿ ಕಾರ್ಯ ಪರಿಶೀಲಿಸಲು ಹೋಗಿದ್ದೆ. ಆ ಸಮಯದಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು. ನನಗೆ ಸ್ವಾಗತ ಕೋರಿದ ಅವರು, ಜಯನಗರ ಕ್ಷೇತ್ರದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ನಮ್ಮ ಸಹಕಾರವಿರುತ್ತದೆ ಎಂದು ಹೇಳುವ ಮೂಲಕ ತಮ್ಮ ದೊಡ್ಡತನ ಪ್ರದರ್ಶಿಸಿದ್ದರು ಎಂದು ನೆನೆದರು.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ಪಾಲಿಕೆ ವತಿಯಿಂದ ಸಿಎಂ ಹಾಗೂ ಡಿಸಿಎಂಗೆ ಅಭಿನಂದನೆಸಲ್ಲಿಸಲು ಶೀಘ್ರವೇ ಮೇಯರ್ ಸಂಪತ್‌ರಾಜ್, ಉಪ ಮೇಯರ್ ಪದ್ಮಾವತಿ ನರಸಿಂಹ ಮೂರ್ತಿ, ಆಡಳಿತ ಮತ್ತು ಪ್ರತಿ ಪಕ್ಷದ ನಾಯಕರನ್ನೊಳಗೊಂಡ ನಿಯೋಗ ಭೇಟಿ ಮಾಡಲು ದಿನಾಂಕ ನಿಗದಿ ಪಡಿಸಿ ಹಾಗೂ ಬೆಂಗಳೂರು ನಗರದ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡೋಣ ಎಂದರು.
ಬಿಬಿಎಂಪಿಯ 3 ಸದಸ್ಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೂವರಲ್ಲಿ ಕೆ.ಆರ್.ಪುರಂ ವಾರ್ಡ್‌ನ ಪೂರ್ಣಿಮಾ ಅವರು ಹಿರಿಯೂರು ಕ್ಷೇತ್ರದಿಂದ ಹಾಗೂ ಉದಯ ಗರುಡಾಚಾರ್ ಚಿಕ್ಕಪೇಟೆ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಇವರಿಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಶಾಸಕ ಬಿ.ಎನ್. ವಿಜಯ್ ಕುಮಾರ್ ಬಿಜೆಪಿ ಶಾಸಕರಾಗಿದ್ದರೂ ಕೂಡ ಎಲ್ಲ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಹೀಗಾಗಿ, ಇಂತಹ ಮಹಾನ್ ನಾಯಕನ ಹೆಸರನ್ನು ಯಾವುದಾದರೂಂದು ಬಡಾವಣೆಗೆ ಇಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಮಾಜಿ ಮೇಯರ್ ಕಟ್ಟೆಸತ್ಯನಾರಾಯಣ, ಪಾಲಿಕೆ ಸದಸ್ಯರಾದ ಉಮೇಶ್‌ಶೆಟ್ಟಿ, ಡಾ.ರಾಜು ಮತ್ತಿತರರು ಅಗಲಿದ ನಾಯಕರನ್ನು ಸ್ಮರಿಸಿದರು.







