ಗೋವಾದಲ್ಲಿ ಅಪ್ರಾಪ್ತ ಬಾಲಕ, ಬಾಲಕಿಗೆ ಕಿರುಕುಳ: 11 ಪ್ರವಾಸಿಗರ ಬಂಧನ

ಪಣಜಿ, ಮೇ 30: ಗೋವಾದ ಕಡಲ ತೀರವೊಂದರಲ್ಲಿ ಕುಳಿತಿದ್ದ ಬಾಲಕ ಮತ್ತು ಆತನ ತಂಗಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 11 ಪ್ರವಾಸಿಗರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಪ್ರವಾಸಿಗರು ಮಹಾರಾಷ್ಟ್ರದ ಪುಣೆ ನಿವಾಸಿಗಳಾಗಿದ್ದಾರೆ. ಮಂಗಳವಾರ ಉತ್ತರ ಗೋವಾದ ಬಾಗಾ ಬೀಚ್‌ಗೆ ಕುಟುಂಬವೊಂದು ಆಗಮಿಸಿತ್ತು. ಸಮೀಪದ ಹೋಟೆಲ್‌ನಲ್ಲಿ ದಂಪತಿ ಉಪಾಹಾರ ಸೇವಿಸುತ್ತಿದ್ದಾಗ ಅವರ ಇಬ್ಬರು ಮಕ್ಕಳು(17ರ ಹರೆಯದ ಬಾಲಕ ಹಾಗೂ 16 ವರ್ಷದ ಬಾಲಕಿ) ಬೀಚ್‌ನಲ್ಲಿದ್ದ ಗುಡಿಸಲಿನಲ್ಲಿ ಕುಳಿತು ಸಮುದ್ರವನ್ನು ವೀಕ್ಷಿಸುತ್ತಿದ್ದರು. ಆಗ ಅಲ್ಲಿಗೆ ಬಂದ 11 ಮಂದಿಯಿದ್ದ ಪ್ರವಾಸಿಗರ ತಂಡವು ಬಾಲಕಿಯ ಫೋಟೋ ತೆಗೆಯಲು ಮುಂದಾಗಿದೆ. ಇದಕ್ಕೆ ಆಕ್ಷೇಪಿಸಿದ ಬಾಲಕನ ಕೆನ್ನೆಗೆ ಬಾರಿಸಿದ ತಂಡ ಬಳಿಕ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಊರಿಗೆ ತೆರಳುವ ಯತ್ನದಲ್ಲಿದ್ದ ಎಲ್ಲಾ ಆರೋಪಿಗಳನ್ನೂ ಬಂಧಿಸಿದ್ದಾರೆ. ಇವರೆಲ್ಲಾ 15ರ ಹರೆಯದ ಬಾಲಕರಾಗಿದ್ದು ಅವರನ್ನು ರಾಜ್ಯ ಸರಕಾರದ ಅಧೀನದ ಆಶ್ರಯ ತಾಣಕ್ಕೆ ಕಳುಹಿಸಲಾಗಿದೆ. ತನಿಖೆಯ ಸಂದರ್ಭ ಆರೋಪಿಗಳು ನೀಡಿದ ಹೇಳಿಕೆಯನ್ನು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ಫೋಟೋ ಕ್ಲಿಕ್ಕಿಸಲು ಬಳಸಲಾಗಿದ್ದ ಮೊಬೈಲ್ ಫೋನನ್ನೂ ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







