ಸಾಲಿಗ್ರಾಮ: ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ

ಉಡುಪಿ, ಮೇ 30: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಲೆ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯ ಮತ್ತು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಎಂಪ್ಲಾಯ್ ಮೆಂಟ್ ಆಫ್ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಆಪ್ ಡ್ರೈ ಲೆಟ್ರಿನ್ (ಪ್ರಾಹಿಬಿಷನ್) ಆಕ್ಟ್ 1993ರ ಪ್ರಕಾರ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಆಚರಣೆಗೆ ಕಾರಣರಾದವರು ಮತ್ತು ಈ ಪದ್ಧತಿಯನ್ನು ಮಾಡುವವರು ಅಪರಾಧಿಗಳಾಗುತ್ತಾರೆ.
ಈ ನಿಯಮದಂತೆ ಒಣ ಶೌಚಾಲಯಗಳನ್ನು ಹೊಂದಿರುವುದಾಗಲಿ, ತಲೆ ಮೇಲೆ ಮಲ ಹೊರುವುದಾಗಲಿ ಹಾಗೂ ಮಲ ಹೊರುವ ಪದ್ಧತಿಗೆ ಪ್ರಚೋದನೆ ನೀಡುವುದನ್ನು ನಿಷೇದಿಸಿದೆ. ಇನ್ನು ಮುಂದೆ ಶೌಚಾಲಯದ ಗುಂಡಿಗಳನ್ನು ಯಾವುದೇ ವ್ಯಕ್ತಿಗಳು ಸ್ವಚ್ಚ ಮಾಡದೇ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಚಗೊಳಿಸುವಂತೆ ತಿಳಿಸಲಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಸಕ್ಕಿಂಗ್ ಯಂತ್ರ ಲಭ್ಯವಿದ್ದು, ಈ ಬಗ್ಗೆ ನಿಗದಿತ ಶುಲ್ಕ ಪಾವತಿಸಿ ಸಕ್ಕಿಂಗ್ ಯಂತ್ರವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಮುಂದೆ ಪ. ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯದ ಗುಂಡಿ ಗಳನ್ನು ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಚ ಮಾಡಿಸಬೇಕು. ತಪ್ಪಿದಲ್ಲಿ ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ನೀಡದಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







