ಮಕ್ಕಳ ಮೇಲೆ ಪೋಷಕರಿಗೆ ಪರಮಾಧಿಕಾರ ಇರುವುದಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಮೇ 30: ಸಣ್ಣ ಮಕ್ಕಳ ಪೋಷಕರನ್ನಾಗಿ ಒಬ್ಬರನ್ನು ನೇಮಿಸಿದ ಬಳಿಕ ಆ ಮಗುವಿನ ಮೇಲೆ ಪೋಷಕರಿಗೆ ಪರಮಾಧಿಕಾರ ಇರುತ್ತದೆ ಎಂಬ ವಾದ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಪೋಷಕರನ್ನಾಗಿ ಒಬ್ಬರನ್ನು ನೇಮಿಸಿದ ಬಳಿಕ ಆ ಮಕ್ಕಳು ಇತರರ ಜೊತೆ ವಾಸಿಸುವ ಬಯಕೆ ವ್ಯಕ್ತಪಡಿಸುವಂತಿಲ್ಲ ಎಂಬ ಗುಜರಾತ್ ಹೈಕೋರ್ಟ್ ತೀರ್ಪಿನ ಬಗ್ಗೆ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
18ರ ಕೆಳಹರೆಯದ ಅಪ್ರಾಪ್ತ ವಯಸ್ಕರು ಸ್ವಂತ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಅಪ್ರಾಪ್ತ ವಯಸ್ಕರ ನೈಜ ಪೋಷಕರು ಅಥವಾ ಕಾನೂನುಬದ್ಧವಾಗಿ ನೇಮಕಗೊಂಡ ಪೋಷಕರಿಗೆ ಈ ಅಧಿಕಾರ ಇರುತ್ತದೆ ಎಂದು ಗುಜರಾತ್ ಹೈಕೋರ್ಟ್ ನೀಡಿರುವ ಆದೇಶವನ್ನು ಒಪ್ಪಲು ತಾವು ಸಿದ್ದರಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿತು.
ಪೋಷಕರನ್ನಾಗಿ ನೇಮಿಸುವಾಗ ಮಗುವಿನ ಹಿತಚಿಂತನೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಹಾಗಿರುವಾಗ ಮಗು ತನ್ನ ಬಯಕೆಯನ್ನು ವ್ಯಕ್ತಪಡಿಸುವಂತಿಲ್ಲ ಎಂದು ಹೇಳಲು ಆಗದು. ಏನಾದರೂ ಆಗಲಿ, ಒಮ್ಮೆ ಮಗುವಿನ ಪೋಷಕರಾಗಿ ನೇಮಕಗೊಂಡವರ ಅಧೀನದಲ್ಲೇ ಆ ಮಗು ಇರಬೇಕು ಎಂಬ ಸಿದ್ಧಾಂತವನ್ನು ತಾವು ಒಪ್ಪುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
7 ವರ್ಷದ ಮೊಮ್ಮಗನನ್ನು ತನ್ನ ಪೋಷಣೆಯಲ್ಲಿ ಇರಿಸಿಕೊಳ್ಳುತ್ತೇನೆ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ಮಗುವನ್ನು ತಾಯಿಯ ಅಧೀನಕ್ಕೆ ಒಪ್ಪಿಸಬೇಕೆಂದು ಸೂಚಿಸಿತ್ತು.
ಅಪ್ರಾಪ್ತ ವಯಸ್ಕರು ಇತರ ವ್ಯಕ್ತಿಗಳೊಂದಿಗೆ ವಾಸಿಸಲು ಇಚ್ಚಿಸಿದರೂ ಪೋಷಕರ ನಿರ್ಧಾರಕ್ಕೆ ವಿರುದ್ಧವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ತಮ್ಮ ಅಧೀನದಲ್ಲೇ ಆ ವ್ಯಕ್ತಿಗಳು ಇರಿಸಿಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಅದು ಐಪಿಸಿಯ ಸೆಕ್ಷನ್ 340ರಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಗುಜರಾತ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಆ ವ್ಯಕ್ತಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಗು ತನ್ನ ನೈಜ ತಾಯಿಯ ಜೊತೆ ಮತ್ತೆ ಸೇರಿಕೊಳ್ಳುತ್ತಿರುವ ಕಾರಣ ಈ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಸಣ್ಣ ಮಗುವಿನ ಪೋಷಕರು ಆ ಮಗುವಿನ ಮೇಲೆ ಸಂಪೂರ್ಣ ಅಧಿಕಾರ ಹೊಂದಿರಲು ಸಾಧ್ಯವಿಲ್ಲ ಎಂಬ ಅಂಶವೂ ಒಪ್ಪತಕ್ಕದ್ದಾಗಿದೆ ಎಂದು ತಿಳಿಸಿತು.







