ಉಡುಪಿಯಲ್ಲಿ ದನದ ವ್ಯಾಪಾರಿಯ ಮೃತ್ಯು: ಎಸ್ಪಿ ನೇತೃತ್ವದಲ್ಲಿ ಎರಡು ತನಿಖಾ ತಂಡ ರಚನೆ
ಮಂಗಳೂರು, ಮೇ 30: ಉಡುಪಿಯ ಪೆರ್ಡೂರಿನಲ್ಲಿ ನಡೆದ ದನದ ವ್ಯಾಪಾರಿಯ ಸಾವಿಗೆ ಸಂಬಂಧಿಸಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಎರಡು ತನಿಖಾ ತಂಡವನ್ನು ರಚಿಸಿರುವುದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಬುಧವಾರ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದು, ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಮಂಗಳೂರು ಜೋಕಟ್ಟೆಯ ನಿವಾಸಿ ಹುಸೈನಬ್ಬ (65) ಅವರ ಮೃತ ಶರೀರವನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿ ಪ್ರತ್ಯೇಕ ತಂಡವನ್ನೂ ರಚಿಸಿರುವುದಾಗಿ ಎಸ್ಪಿ ಹೇಳಿದ್ದಾರೆಂದು ಖಾದರ್ ತಿಳಿಸಿದರು.
ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಂಡಿರುವುದು ಸಾಬೀತಾದಲ್ಲಿ ಕ್ರಮ ಜರಗಿಸುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆಂದು ಹೇಳಿದ ಖಾದರ್, ದುಷ್ಕೃತ್ಯ ನಡೆಸಿದ್ದರೆ ಅಂತಹ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಹೇಳಿದ್ದಾರೆ.
ಮಂಗಳವಾರ ಸುರಿದ ಭಾರೀ ಮಳೆಗೆ ಎರಡು ಜೀವಗಳು ಬಲಿಯಾಗಿದ್ದು, ಈ ಇಬ್ಬರ ಕುಟುಂಬಗಳಿಗೂ ಜಿಲ್ಲಾಡಳಿತದಿಂದ ತಲಾ 5 ಲಕ್ಷ ರೂ. ವಿತರಿಸಿದ್ದಾರೆ. ಅಲ್ಲದೆ, ಮಳೆಯಿಂದ ಪೂರ್ಣ ಹಾನಿಯಾದ ಮನೆಗೆ 1,01,900 ರೂ. ಹಾಗೂ ಭಾಗಶಃ ಹಾನಿಗೆ 52,000 ರೂ.ಗಳನ್ನು ನೀಡಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.
ಖಾದರ್ ಅಭಿಂನಂದನೆ
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದ.ಕ. ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಅವರ ಹೆಸರನ್ನು ಪ್ರಕಟಿಸಿರುವುದಕ್ಕೆ ಶಾಸಕ ಖಾದರ್ ಅಭಿನಂದಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫೆರ್ನಾಂಡಿಸ್, ಸಿದ್ದರಾಮಯ್ಯ, ಜಿ.ಪರಮೇಶ್ವರ್, ವೇಣುಗೋಪಾಲ್, ಹರಿಪ್ರಸಾದ್, ರಮಾನಾಥ ರೈ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.







