ಮೂಡುಬಿದಿರೆ: ಜಿಯೋ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರಿಂದ ತಡೆ

ಮೂಡುಬಿದಿರೆ, ಮೇ.30: ರಿಲಾಯನ್ಸ್ ಕಂಪೆನಿಯ ಜಿಯೋ ಮೊಬೈಲ್ ಟವರ್ ನಿರ್ಮಾಣವನ್ನು ಕೋಟೆಬಾಗಿಲಿನ ಜನವಸತಿ ಪ್ರದೇಶದಲ್ಲಿ ಮಾಡಲಾಗು ತ್ತಿದ್ದು ಈ ಕಾರ್ಯದಲ್ಲಿ ನಿಯೋಜಿಸಲಾದ ಕಾರ್ಮಿಕರನ್ನು ಸ್ಥಳೀಯರು ಓಡಿಸಿದ ಪ್ರಸಂಗ ಬುಧವಾರ ನಡೆಯಿತು.
ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನಲ್ಲಿ ಮಸೀದಿಗೆ ಸೇರಿದ ಜಾಗದಲ್ಲಿ ರಿಲಾಯನ್ಸ್ ಕಂಪೆನಿಯ ಮೊಬೈಲ್ ಟವರ್ ನಿರ್ಮಾಣಕ್ಕೆ ಈ ಹಿಂದೆ ಪುರಸಭೆ ಅನುಮತಿ ನೀಡಿತ್ತು. ಸದ್ರಿ ಜಾಗದ ಸುತ್ತ ಮುತ್ತ ಸುಮಾರು 25 ಮನೆಗಳಿದ್ದು, ಶಾಲೆ, ದೇವಸ್ಥಾನ ಕೂಡ ಇದೆ. ಸ್ಥಳೀಯರ ಅಭಿಪ್ರಾಯವನ್ನು ಪಡೆಯದೆ, ಸ್ಥಳ ಪರಿಶೀಲನೆ ನಡೆಸದೆ ಪುರಸಭೆ ಮೊಬೈಲ್ ಟವರ್ ನಿರ್ಮಾಣಕ್ಕೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಸ್ಥಳೀಯರಾದ ಅಬ್ದುಲ್ ರಹಿಮಾನ್ ಎಂಬವರು ಮನವಿ ಮಾಡಿದ್ದರು. ಈ ದೂರಿನ ಅಧಾರದಲ್ಲಿ ಪುರಸಭೆ ಮೊಬೈಲ್ ಟವರ್ ನಿರ್ಮಾಣಕ್ಕೆ ನೀಡಿದ ಅನುಮತಿಯನ್ನು ರದ್ದುಪಡಿಸಿತ್ತು.
ಆ ಮೇಲೆಯೂ ಜಿಯೋ ಕಂಪೆನಿಯ ಉದ್ಯೋಗಿ ಬುಧವಾರ ನಾಲ್ಕೈದು ಕಾರ್ಮಿಕರೊಂದಿಗೆ ಕೋಟೆಬಾಗಿಲಿಗೆ ಆಗಮಿಸಿ ಜೆಸಿಬಿ ಮೂಲಕ ಟವರ್ ನಿರ್ಮಾಣಕ್ಕೆ ಜಾಗ ಸಮತಟ್ಟುಗೊಳಿಸಲು ಯತ್ನಿಸಿದರು ಎನ್ನಲಾಗಿದೆ. ಇದಕ್ಕೆ ಆಕ್ಷೇಪಣೆ ಮಾಡಿದ ಸ್ಥಳಿಯರೊಂದಿಗೆ ಕಂಪೆನಿ ಸಿಬ್ಬಂದಿ ಉದ್ಧಟತದಿಂದ ವರ್ತಿಸಿದಾಗ ಆಕ್ರೋಶಗೊಂಡ ಸ್ಥಳೀಯರು ಸಿಬ್ಬಂದಿಗೆ ಮೇಲೆ ಹಲ್ಲೆ ನಡೆಸಿ, ಕಾರ್ಮಿಕರನ್ನು ಅಲ್ಲಿಂದ ಓಡಿಸಿದರೆನ್ನಲಾಗಿದೆ.





