ನಂದಾವರ ಸ್ಥಳೀಯರಿಂದ ಮನವಿ: ಸರ್ವೇ ಕಾರ್ಯವನ್ನು ಮುಂದೂಡಿದ ಅಧಿಕಾರಿಗಳು

ಬಂಟ್ವಾಳ, ಮೇ 30: ವಕ್ಫ್ ಹಾಗೂ ಖಾಸಗಿ ಜಾಗವೊಂದರ ವಿಷಯಕ್ಕೆ ಸಂಬಂಧಿಸಿ ಜಾಗದ ಗಡಿಗುರುತಿಗೆ ಸ್ಥಳೀಯರ ಮನವಿಯ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ಮುಂದೂಡಿದ ಘಟನೆ ನಂದಾವರ ಮಸೀದಿ ಬಳಿ ಬುಧವಾರ ನಡೆದಿದೆ.
ಖಾಸಗಿ ಜಮೀನು ಮಾಲಕರು ಮತ್ತು ಪ್ರಾರ್ಥನಾ ಮಂದಿರಕ್ಕೆ ಸಂಬಂಧಿಸಿ ಇರುವ ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಗಡಿ ಗುರುತು ಮಾಡಲು ಅಧಿಕಾರಿಗಳ ತಂಡ ಬುಧವಾರ ನಂದಾವರಕ್ಕೆ ತೆರಳಿತ್ತು. ಈ ಸಂದರ್ಭ ಸ್ಥಳೀಯರ ಮನವಿ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಎರಡು ಕಡೆಯ ದಾಖಲೆ ಪರಿಶೀಲಿಸಿ, ಸರ್ವೇ ಬಗ್ಗೆ ಮುಂದಿನ ದಿನವನ್ನು ಕಂದಾಯ ಇಲಾಖೆ ನಿಗದಿ ಮಾಡಿ ತಿಳಿಸಿದ ನಂತರವೇ ಸೂಕ್ತ ಬಂದೋಬಸ್ತ್‌ನಲ್ಲಿ ಅಳತೆ ನಡೆಯಲಿದೆ ಎಂದು ತಿಳಿದುಬಂದಿದೆ. ಗಡಿಗುರುತು ಸಂದರ್ಭದಲ್ಲಿ ಸ್ಥಳೀಯರು ಹಾಗೂ ಪೊಲೀಸ್‌ರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಲ್ಲದೆ, ಸರ್ವೇ ಮಾಡದಂತೆ ಒತ್ತಾಯಿಸಿ ಸ್ಥಳೀಯರು ರಸ್ತೆಯಲ್ಲಿ ಧರಣಿ ಕುಳಿತ ಪ್ರಸಂಗವೂ ನಡೆಯಿತು.
ತದನಂತರ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಸರ್ವೇ ಕಾರ್ಯವನ್ನು ಮುಂದೂಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ನಂದಾವರ ಮಸೀದಿಯ ಮುಂಭಾಗದ ರಸ್ತೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಇದರಿಂದ ಮುಂಜಾಗೃತ ಕ್ರಮವಾಗಿ ಹೆಚ್ಚುವರಿ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಈ ಜಾಗದ ಬಗ್ಗೆ ಎರಡೂ ಕಡೆಯಿಂದ ದಾವೆ ಹೂಡಲಾಗಿದ್ದು, ಪ್ರಕರಣವು ನ್ಯಾಯಾಲಯದ ಮೆಟ್ಟಿಲಲ್ಲಿದೆ ಎಂದು ಹೇಳಲಾಗುತ್ತಿದೆ.







