ತೂತುಕುಡಿ ಗೋಲಿಬಾರ್‌ನಲ್ಲಿ ಗಾಯಗೊಂಡವರನ್ನು ಭೇಟಿಯಾದ ರಜಿನಿಕಾಂತ್

ತೂತುಕುಡಿ, ಮೇ 30: ಚಿತ್ರನಟ ಹಾಗೂ ರಾಜಕಾರಣಿ ರಜಿನಿಕಾಂತ್ ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡವರನ್ನು ತೂತುಕುಡಿಯಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡವರ ಕುಟುಂಬದ ಸದಸ್ಯರಿಗೆ ರಜನಿಕಾಂತ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ.
ಗಾಯಾಳುಗಳನ್ನು ಭೇಟಿಯಾದ ಬಳಿಕ ತೂತುಕುಡಿಯ ಹೊರವಲಯದ ರೆಸೋರ್ಟ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಜನಿಕಾಂತ್, ಸ್ಟರ್ಲೈಟ್ ಘಟಕದ ವಿರುದ್ಧ ಜನರು ನಡೆಸಿದ ಪ್ರತಿಭಟನೆ 100ನೇ ದಿನ ಹಿಂಸೆಗೆ ತಿರುಗಿತು. ದೇಶ ವಿರೋಧಿ ಶಕ್ತಿಗಳು ಈ ಪ್ರತಿಭಟನಕಾರರ ನಡುವೆ ಸೇರಿಕೊಂಡರು ಹಾಗೂ ಪೊಲೀಸ್ ಗೋಲಿಬಾರ್‌ಗೆ ಕಾರಣರಾದರು. ಈ ಸಮಾಜ ವಿರೋಧಿ ಶಕ್ತಿಗಳನ್ನು ದಿವಂಗದ ಮುಖ್ಯಮಂತ್ರಿ ಅವರಂತೆ ಉಕ್ಕಿನ ಕೈಗಳಿಂದ ನಜ್ಜುಗುಜ್ಜು ಮಾಡಬೇಕಿತ್ತು ಎಂದರು. ‘‘ಪ್ರತಿಭಟನಕಾರರ ನಡುವೆ ನುಸುಳಿದ ಸಮಾಜ ವಿರೋಧಿಗಳಿಂದ ಪ್ರತಿಭಟನೆಯಲ್ಲಿ ರಕ್ತಪಾತವಾಗಲು ಕಾರಣವಾಯಿತು. ಸಮಾಜ ವಿರೋಧಿಗಳನ್ನು ಉಕ್ಕಿನ ಕೈಯಲ್ಲಿ ಪುಡಿಗಟ್ಟಲು ರಾಜ್ಯ ಸರಕಾರ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅನುಸರಿಸಬೇಕಿತ್ತು. ಇದು ತಮಿಳುನಾಡಿಗೆ ಗಂಭೀರ ಬೆದರಿಕೆ’’ ಎಂದು ರಜನಿಕಾಂತ್ ಹೇಳಿದ್ದಾರೆ.
ರಜನಿ ಮಂಡ್ರಂನ ಪರವಾಗಿ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 10 ಸಾವಿರ ರೂ. ಘೋಷಿಸಲಾಯಿತು. ಆದಾಗ್ಯೂ, ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ 8 ಮಂದಿಯ ಕುಟುಂಬದ ಸದಸ್ಯರನ್ನು ರಿಸೋರ್ಟ್‌ಗೆ ಕರೆದುಕೊಂಡು ಬಂದರು. ಆದರೆ, ರಜನಿಕಾಂತ್ ಅವರನ್ನು ಭೇಟಿ ಮಾಡಲು ಅವರಿಗೆ ಅವಕಾಶ ನೀಡಿಲ್ಲ. ಕೃಷಿ ನಾಶವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡಿನಲ್ಲಿ ಉದ್ಯೋಗ ಸೃಷ್ಟಿಸಲು ರಾಜ್ಯ ಸರಕಾರದ ಕೈಗಾರಿಕೆ ಹೂಡಿಕೆಯನ್ನು ತಡೆಯಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡಿದರು.







