ಸಿಇಒ ಕೋಚ್ಚರ್ ವಿರುದ್ಧ ಆರೋಪ: ತನಿಖೆಗೆ ಐಸಿಐಸಿಐ ಬ್ಯಾಂಕ್ ಸಜ್ಜು

ಮುಂಬೈ,ಮೇ 30: ತನ್ನ ಸಿಇಒ ಚಂದಾ ಕೋಚ್ಚರ್ ವಿರುದ್ಧ ಅನಾಮಿಕ ವ್ಯಕ್ತಿಯೋರ್ವ ಮಾಡಿರುವ ಆರೋಪಗಳ ಕುರಿತು ತನಿಖೆಯನ್ನು ನಡೆಸುವುದಾಗಿ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ಬುಧವಾರ ತಿಳಿಸಿದೆ.
ಸ್ವತಂತ್ರ ತನಿಖೆಯು ನಡೆಯಲಿದೆ ಮತ್ತು ಕೋಚ್ಚರ್ ಅವರು ಬ್ಯಾಂಕಿನ ನೀತಿ ಸಂಹಿತೆಯನ್ನು ಪಾಲಿಸಿರಲಿಲ್ಲ ಮತ್ತು ಅವರ ಕ್ರಮಗಳು ಹಿತಾಸಕ್ತಿಗಳ ಸಂಘರ್ಷದಿಂದ ಕೂಡಿದ್ದವು ಎಂಬ ಆರೋಪಗಳನ್ನು ಅದು ಪರಿಶೀಲಿಸಲಿದೆ ಎಂದು ಬ್ಯಾಂಕ್ ಹೇಳಿದೆ.
ವೀಡಿಯೊಕಾನ್ ಸಮೂಹಕ್ಕೆ ಸಾಲ ನೀಡುವಾಗ ಕೋಚ್ಚರ್ ಅವರು ಅನುಚಿತ ಒಲವು ಪ್ರದರ್ಶಿಸಿದ್ದರು ಎಂಬ ಆರೋಪಗಳನ್ನು ನಿವಾರಿಸಲು ಐಸಿಐಸಿಐ ಬ್ಯಾಂಕ್ ಶ್ರಮಿಸುತ್ತಿದೆ. ಕೋಚ್ಚರ್ ಅವರ ಪತಿಯ ನವೀಕರಿಸಬಹುದಾದ ಶಕ್ತಿ ಕಂಪನಿಯಲ್ಲಿ ವೀಡಿಯೊಕಾನ್ ಸ್ಥಾಪಕರು ಹೂಡಿಕೆಯನ್ನು ಮಾಡಿದ್ದರು.
ಕೋಚ್ಚರ್ ಅವರ ಬೆನ್ನಿಗೆ ಬಲವಾಗಿ ನಿಂತಿರುವ ಬ್ಯಾಂಕ್,ಅವರ ವಿರುದ್ಧದ ಆರೋಪಗಳನ್ನು ದುರುದ್ದೇಶಪೂರಿತ ಮತ್ತು ನಿರಾಧಾರ ಎಂದು ಬಣ್ಣಿಸಿದೆ.
Next Story





