ನೀರವ್ ಮೋದಿ ಕುಟುಂಬದ ಒಡೆತನದ ಪವನ ವಿದ್ಯುತ್ ಸ್ಥಾವರ ಮುಟ್ಟುಗೋಲು

ಹೊಸದಿಲ್ಲಿ,ಮೇ 30: ಎರಡು ಶತಕೋಟಿ ಡಾ.ಗೂ ಅಧಿಕ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವಹಿವಾಟು ಕುರಿತು ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ವು ಪ್ರಮುಖ ಆರೋಪಿ ನೀರವ್ ಮೋದಿ ಕುಟುಂಬವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಹೊಂದಿರುವ 52.80 ಕೋ.ರೂ. ಮೌಲ್ಯದ ಪವನ ವಿದ್ಯುತ್ ಸ್ಥಾವರವನ್ನು ಜಪ್ತಿ ಮಾಡಿದೆ.
ಸೋಲಾರ್ ಎಕ್ಸ್‌ಪೋರ್ಟ್ಸ್,ಸ್ಟೆಲ್ಲರ್ ಡೈಮಂಡ್ಸ್,ಡೈಮಂಡ್ ಆರ್ ಯುಎಸ್ ಮತ್ತು ನೀಶಲ್ ಮರ್ಕಂಡೈಸಿಂಗ್ ಪ್ರೈ.ಲಿ. ಇವು 9.6 ಮೆ.ವ್ಯಾ.ಸಾಮರ್ಥ್ಯದ ಈ ವಿದ್ಯುತ್ ಸ್ಥಾವರದ ಒಡೆತನವನ್ನು ಹೊಂದಿವೆ. ಈ ಪೈಕಿ ಮೊದಲ ಮೂರು ಸಂಸ್ಥೆಗಳು ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿವೆ. ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಸ್ಥಾವರದ ಜಪ್ತಿಗಾಗಿ ತಾತ್ಕಾಲಿಕ ಆದೇಶವೊಂದನ್ನು ಹೊರಡಿಸಲಾಗಿದೆ ಎಂದು ಇಡಿ ಬುಧವಾರ ತಿಳಿಸಿದೆ.
ಮೇ 24ರಂದು ನೀರವ್ ಮತ್ತು ಕುಟುಂಬದ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುವ ಇಡಿ ಈವರೆಗೆ ನೀರವ್‌ಗೆ ಸೇರಿದ 691 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.
ಸಿಬಿಐ ಕೂಡ ಈ ತಿಂಗಳ ಪೂರ್ವಾರ್ಧದಲ್ಲಿ ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೋಷಾರೋಪಣ ಪಟ್ಟಿಗಳನ್ನು ದಾಖಲಿಸಿದೆ.





