ಶಿಕ್ಷಕ-ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ಶಾಸಕ ಎಂ.ಪಿ ಕುಮಾರಸ್ವಾಮಿ

ಮೂಡಿಗೆರೆ, ಮೇ 30: ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀದರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 45 ವರ್ಷದಿಂದ ಪದವೀದರರ ಮತ್ತು ಶಿಕ್ಷಕರ ಸಮಸ್ಯೆಗೆ ಬಿಜೆಪಿ ಸ್ಪಂದಿಸುತ್ತಿರುವುದರಿಂದ ಸತತವಾಗಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗಿದೆ. ಈ ಬಾರಿಯೂ ಪದವೀದರರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಮತ್ತು ಶಿಕ್ಷಕರ ಕ್ಷೇತ್ರದಿಂದ ಗಣೇಶ್ ಕಾರ್ಣಿಕ್ ಸ್ಪರ್ಧಿಸಿದ್ದು, ಅವರ ಗೆಲವು ಶತಸಿದ್ದ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರದಲ್ಲಿ ನೌಕರರ ಮತ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದೆ. ಇದರ ಅರ್ಥ ಪದವೀದರರು ಮತ್ತು ನೌಕರರು ಪಕ್ಷದ ಪರವಾಗಿದ್ದಾರೆಂದು ಸಾಬೀತಾಗಿದೆ. ಪ್ರಮುಖವಾಗಿ ಗಣೇಶ್ ಕಾರ್ಣಿಕ್ ಈ ಹಿಂದೆ ಶಿಕ್ಷಕರ ಪರವಾಗಿ ವಿಧಾನಸಭೆಯ ಒಳಗೂ, ಹೊರಗೂ ಹೋರಾಟ ಮಾಡಿದನ್ನುಸ್ಮರಿಸಿಕೊಳ್ಳಬಹುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಈ ಹಿಂದೆ ಬಿಜೆಪಿಯಿಂದ ಆಯ್ಕೆಯಾಗಿದ್ದ ವಿಧಾನ ಪರಿಷತ್ ಸದಸ್ಯರು, ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಪ್ರವಾಸೋಧ್ಯಮ, ಕಟ್ಟಡ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ವಸತಿ ರಹಿತರಿಗೆ ಮನೆ ಸೇರಿದಂತೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್ ಕಾರ್ಣಿಕ್ ಅವರು, ಸತತ ಎರಡು ಬಾರಿ ಗೆಲುವು ಸಾಧಿಸಿ ಶಿಕ್ಷಕರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ವಿರೋಧ ಪಕ್ಷಗಳು ಇವರ ಪ್ರಾಮಾಣಿಕತೆಯನ್ನು ಬದಿಗಿಟ್ಟು, ಏನೂ ಕೆಲಸ ಮಾಡಿಲ್ಲವೆಂದು ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಅತೀ ಹೆಚ್ಚು ಮತವನ್ನು ಜಿಲ್ಲೆಯಿಂದ ಎರಡೂ ಅಭ್ಯರ್ಥಿಗಳಿಗೆ ನೀಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಬಳಿಕ ಶಿಕ್ಷಕರ ಮತ್ತು ಪದವೀದರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಪರ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ನೇತೃತ್ವದಲ್ಲಿ ಪಟ್ಟಣದಲ್ಲಿ ಮತಯಾಚಿಸಿದರು.
ಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಮಂಡಲ ಅಧ್ಯಕ್ಷ ಪ್ರಮೋದ್ ದುಂಡುಗ, ಮುಖಂಡರಾದ ಗಜೇಂದ್ರ ತರುವೆ, ಕಲ್ಲೇಶ್ ಮಾಕೋನಹಳ್ಳಿ, ವಿನೋದ್ ಕಣಚೂರು, ಆದರ್ಶ ತರುವೆ, ನಯನ ತಳವಾರ, ಬಾಲು, ಪರೀಕ್ಷಿತ್, ಚಂದ್ರು ಸಾಲಿಯಾನ್, ನವೀಣ್ ಆಣೂರು, ರಘು ಪಟದೂರು, ನವೀನ್ ಆಣೂರು ಮತ್ತಿತರರಿದ್ದರು.







