ಈ ವರ್ಷ ದೇಶಾದ್ಯಂತ ಸಾಮಾನ್ಯ ಮಳೆ: ಐಎಂಡಿ

ಹೊಸದಿಲ್ಲಿ, ಮೇ 30: ಪೂರ್ವ ಮತ್ತು ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶಾದ್ಯಂತ ಈ ವರ್ಷ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಬುಧವಾರ ತಿಳಿಸಿದೆ. ಇವೆರಡು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಕಳೆದ ಎಪ್ರಿಲ್‌ನಲ್ಲಿ ಪ್ರಕಟಿಸಿದ್ದ ತನ್ನ ಮೊದಲ ಸುತ್ತಿನ ಮಳೆ ಭವಿಷ್ಯದಲ್ಲಿ ಯಾವುದೇ ಬದಲಾವಣೆಯನ್ನು ಅದು ಮಾಡಿಲ್ಲ.
ಒಟ್ಟಾರೆ ದೇಶದಲ್ಲಿ ಸುರಿಯಲಿರುವ ಮಳೆಯ ಪ್ರಮಾಣವು ಜುಲೈನಲ್ಲಿ ದೀರ್ಘಾವಧಿ ಸರಾಸರಿ ಅಥವಾ ವಾಡಿಕೆಗಿಂತ ಶೇ.101 ಮತ್ತು ಆಗಸ್ಟ್‌ನಲ್ಲಿ ಶೇ.94ರಷ್ಟು(ಶೇ.9 ಹೆಚ್ಚು ಅಥವಾ ಕಡಿಮೆ) ಆಗಲಿದೆ ಎಂದು ಐಎಂಡಿ ತಿಳಿಸಿದೆ.
ಮಳೆಯ ಪ್ರಮಾಣ ದೀರ್ಘಾವಧಿ ಸರಾಸರಿಯ ಶೇ.90ರಿಂದ 96ರೊಳಗಿದ್ದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಮತ್ತು ಶೇ.96ರಿಂದ 104ರೊಳಗಿದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ದೀರ್ಘಾವಧಿ ಸರಾಸರಿಯ ಶೇ.90ಕ್ಕಿಂತ ಕಡಿಮೆ ಮಳೆ ಬಿದ್ದರೆ ಅದನ್ನು ಮಳೆ ಕೊರತೆ ಎಂದು ಮತ್ತು ಶೇ.104ರಿಂದ 110ರೊಳಗಿದ್ದರೆ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಎಂದು ಪರಿಗಣಿಸಲಾಗುತ್ತದೆ. ಶೇ.110ಕ್ಕಿಂತ ಹೆಚ್ಚು ಮಳೆಯಾದರೆ ಅದು ಅತಿವೃಷ್ಟಿಯಾಗುತ್ತದೆ. ದೇಶಾದ್ಯಂತ 2018ರಲ್ಲಿ(ಜೂನ್-ಸೆಪ್ಟೆಂಬರ್) ಮುಂಗಾರು ಮಳೆಯು ಸಾಮಾನ್ಯವಾಗಿರುವ ಶೇ.43ರಷ್ಟು ಸಾಧ್ಯತೆಯಿದೆ(ವಾಡಿಕೆ ಮಳೆಯ ಶೇ.96-ಶೇ.104) ಎಂದು ಐಎಂಡಿ ತಿಳಿಸಿದೆ.
ಪ್ರದೇಶವಾರು,ವಾಯುವ್ಯ ಭಾರತದಲ್ಲಿ ವಾಡಿಕೆ ಮಳೆಯ ಶೇ.100,ಮಧ್ಯ ಭಾರತದಲ್ಲಿ ಶೇ.99,ದಕ್ಷಿಣ ಭಾರತದಲ್ಲಿ ಶೇ.95 ಮತ್ತು ಪೂರ್ವ ಹಾಗೂ ಈಶಾನ್ಯ ಭಾರತಗಳಲ್ಲಿ ಶೇ.93ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಶೇ.8ರಷ್ಟು ಹೆಚ್ಚು ಅಥವಾ ಕಡಿಮೆಯಾಗಬಹುದು ಎಂದು ಅದು ಹೇಳಿದೆ.
ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವರದಿಯಂತೆ ಜೂನ್‌ನಲ್ಲಿ ದೀರ್ಘಾವಧಿ ಸರಾಸರಿಯ ಶೇ.111ರಷ್ಟು ಮಳೆಯಾಗುವ ಸಾಧ್ಯತೆಯಿದೆಯಾದರೂ, ಜುಲೈ ಮತ್ತು ಆಗಸ್ಟ್‌ನಲ್ಲಿ ಶೇ.97 ಮತ್ತು ಶೇ.95ರಷ್ಟು ಮಳೆಯಾಗಬಹುದು.
ಮಳೆಯು ಸೆಪ್ಟೆಂಬರ್‌ನಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದ್ದು,ಅದು ದೀರ್ಘಾವಧಿ ಸರಾಸರಿಯ ಶೇ.101ರಷ್ಟು ಮಳೆಯ ಪ್ರಮಾಣವನ್ನು ದಾಖಲಿಸಬಹುದು ಎಂದು ಅದು ಹೇಳಿದೆ.







