ಚಿಕ್ಕಮಗಳೂರು: 9ನೇ ದಿನಕ್ಕೆ ಕಾಲಿಟ್ಟ ಗ್ರಾಮೀಣ ಅಂಚೆ ನೌಕರರ ಮುಷ್ಕರ

ಚಿಕ್ಕಮಗಳೂರು ಮೇ 30, ಅಂಚೆ ಇಲಾಖೆಯ ಗ್ರಾಮೀಣ ಅಂಚೆ ನೌಕರರ ಸೇವಾ ಭದ್ರತೆ ಮತ್ತು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸೇವಾ ಸವಲತ್ತುಗಳನ್ನು ಒದಗಿಸುವ ಕಮೇಲೇಶ್ ಚಂದ್ರ ವರದಿಯ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಗ್ರಾಮೀಣ ಅಂಚೆ ನೌಕರರ ಮುಷ್ಕರವು ಜಿಲ್ಲೆಯಲ್ಲಿ 9ನೇ ದಿನಕ್ಕೆ ಕಾಲಿಟ್ಟಿದೆ.
ಅಂಚೆ ನೌಕರರ ಚಳವಳಿಗೆ ಬೆಂಬಲ ಸೂಚಿಸಿ ಸಿಪಿಐ ಪಕ್ಷದ ಮುಖಂಡ ಬಿ.ಅಮ್ಜದ್, ರೈತ ಮುಖಂಡರಾದ ಗುರುಶಾಂತಪ್ಪ, ಚಂದ್ರಶೇಖರ್, ಚಂದ್ರಗೌಡ ಮತ್ತಿತರರು ಚಳವಳಿಯಲ್ಲಿ ಭಾಗವಹಿಸಿದ್ದರು.
ಚಳವಳಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಅಮ್ಜದ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ದುಡಿಯುವ ವರ್ಗದ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಂಚೆ ಇಲಾಖೆಯ ನೌಕರರಿಗೆ ಅತೀ ಕಡಿಮೆ ಸಂಭಾವನೆ ನೀಡಿ ದುಡಿಸಿಕೊಂಡು ಕಾರ್ಮಿಕರನ್ನು ಶೋಷಿಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕರ ಶ್ರಮದ ಬಗ್ಗೆ 'ಬಳಸು-ಬಿಸಾಡು' ಎಂಬ ಧೋರಣೆ ಅನುಸರಿಸುತ್ತಿದೆ. ಯಾವುದೇ ರೀತಿಯ ಸೇನಾ ಭದ್ರತೆ ಒದಗಿಸದೆ ಹೊಣೆಗೇಡಿತನ ಪ್ರದರ್ಶಿಸುತ್ತದೆ ಎಂದು ದೂರಿದರು.
ರೈತ ಸಂಘದ ಗುರುಶಾಂತಪ್ಪ ಮಾತನಾಡಿ, ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ ಮೋದಿ ಅವರು ಸದ್ಯ ದುಡಿಯುತ್ತಿರುವ ಕಾರ್ಮಿಕರ ಬದುಕಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಭಾರತೀಯ ಮಾನವೀಯ ಮೌಲ್ಯಗಳನ್ನು ಸದೃಢಗೊಳಿಸಲು ಅಂಚೆ ಸಂಸ್ಕೃತಿ ಅಪಾರ ಕೊಡುಗೆ ನೀಡಿದೆ. ಅಂಚೆ ಇಲಾಖೆಯನ್ನು ಬಲಪಡಿಸಲು ಅಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯುತ್ತಿರುವ ಅಂಚೆ ನೌಕರರಿಗೆ ಮೂಲಭೂತ ಸೇವಾ ಸವಲತ್ತು ಒದಗಿಸುವುದು ಸರಕಾರಗಳ ಕರ್ತವ್ಯ ಎಂದರು.
ಚಳವಳಿಯ ನೇತೃತ್ವವನ್ನು ನೌಕರರ ಸಂಘದ ಅಧ್ಯಕ್ಷ ಕೆ.ಟಿ.ಶೇಷಣ್ಣಗೌಡ, ಕಾರ್ಯದರ್ಶಿ ಜೋಸೆಫ್ ಭಾರಿಟ್ಟೋ, ಅಂಚೆ ನೌಕರರ ಸಂಘದ ಪದಾಧಿಕಾರಿಗಳಾದ ಕೃಷ್ಣರಾವ್, ನಿತಿನ್ ವಹಿಸಿದ್ದರು.







