ಕೃಷ್ಣರಾಜಪೇಟೆ: ನಾಪತ್ತೆಯಾಗಿದ್ದ ಪ್ರೇಮಿಗಳು ಸತಿಪತಿಗಳಾಗಿ ಆಗಮನ; ಪೊಲೀಸ್ ರಕ್ಷಣೆಯಲ್ಲಿ ಮನೆ ಸೇರಿದ ನವಜೋಡಿ

ಕೃಷ್ಣರಾಜಪೇಟೆ, ಮೇ 30: ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಸರಳ ವಿವಾಹವಾಗಿ ಪೊಲೀಸ್ ರಕ್ಷಣೆಯೊಂದಿಗೆ ಹುಡುಗನ ಮನೆಗೆ ತೆರಳಿದ ಘಟನೆ ನಡೆದಿದೆ.
ಪಟ್ಟಣದ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪ್ಲೊಮ ಓದುತ್ತಿದ್ದ ಸುಮಾ(19) ಮತ್ತು ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದ ಪ್ರಜ್ವಲ್(23) ಪ್ರೀತಿಸಿ ವಿವಾಹವಾದ ಜೋಡಿ.
ಪಟ್ಟಣದ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪ್ಲೊಮ ಓದುತ್ತಿದ್ದ ಸುಮಾ(19) ಅವರಿಗೆ ಕೃ.ರಾ.ಪೇಟೆ ಪಟ್ಟಣದ ತಮ್ಮ ಅಕ್ಕನ ಮನೆಗೆ ಆಗಾಗ್ಗೆ ಬರುತ್ತಿದ್ದ ಪ್ರಜ್ವಲ್ ನಡುವೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿದ್ದು, ಅವರು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಟ್ಟಣದ ತನ್ನ ಅಕ್ಕನ ಮನೆಯಲ್ಲಿ ಓದುತ್ತಿದ್ದ ಪ್ರಜ್ವಲ್ ಪಿಯುಸಿ ನಂತರ ಮೈಸೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದನು. ಹುಡುಗಿ ಪಟ್ಟಣದ ಪಾಲಿಟಿಕ್ನಿಕ್ ಕಾಲೇಜಿಗೆ ಬರುತ್ತಿದ್ದಳು. ಇದ್ದಕಿದ್ದಂತೆಯೇ ಕಳೆದ ಒಂದು ವಾರದಿಂದ ಇಬ್ಬರೂ ನಾಪತ್ತೆಯಾಗಿದ್ದು, ಮೇ 25ರಂದು ಮಂಡ್ಯದ ಉಪನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಿ ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ.
ಈ ನಡುವೆ ಹುಡುಗಿಯ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಬೆಂಗಳೂರಿನಲ್ಲಿ ಸ್ವಲ್ಪ ದಿನ ಇದ್ದು, ನಂತರ ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ರಿಜಿಸ್ಟರ್ ಮದುವೆಯಾಗಿರುವುದಾಗಿ ತಿಳಿಸಿದಾಗ ಮನೆಗೆ ಹೋಗಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇಬ್ಬರೂ ಒಂದೇ ಗ್ರಾಮದವರಾಗಿದ್ದರಿಂದ ಇಬ್ಬರ ಪೋಷಕರನ್ನು ಠಾಣೆಗೆ ಕರೆಸಿ, ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ಪರಸ್ಪರ ಒಪ್ಪಿ ವಿವಾಹವನ್ನೂ ಆಗಿದ್ದಾರೆ ಎಂದು ಕುಟುಂಬದವರಿಗೆ ಎಸ್‍ಐ ಎಚ್.ಎಸ್.ವೆಂಕಟೇಶ್ ಅವರು ತಿಳುವಳಿಕೆ ಹೇಳಿ ನವ ದಂಪತಿಗಳನ್ನು ಹುಡುಗನ ಮನೆಗೆ ಕಳುಹಿಸಿಕೊಟ್ಟರು.







