ಮಳೆಯಿಂದ ಸಹಜ ಸ್ಥಿತಿಗೆ ಮಂಗಳೂರು: ಎನ್‌ಡಿಆರ್‌ಎಫ್ ತಂಡ ಮರಳಿ ಬೆಂಗಳೂರಿಗೆ

ಮಂಗಳೂರು, ಮೇ 31: ದ.ಕ. ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಮಾಯದಂತ ಮಳೆಗೆ ಮಂಗಳೂರು ಮುಳುಗಿದಂತಹ ವಾತಾವರಣ ಸೃಷ್ಟಿಯಾಗಿದ್ದರೂ ಕಳೆದ 48 ಗಂಟೆಗಳ ಅವಧಿಯಲ್ಲಿ ನಗರ ಬಹುತೇಕ ಸಹಜ ಸ್ಥಿತಿಗೆ ಮರಳಿದೆ.
ನಗರದ ಹಲವೆಡೆ ಜಲಾವೃತಗೊಂಡಿದ್ದ ಪ್ರದೇಶಗಳಿಂದ ನೀರು ಸಂಪೂರ್ಣವಾಗಿ ಹರಿದು ಹೋಗಿ ಅಸ್ತವ್ಯಸ್ಥಗೊಂಡಿದ್ದ ಜನಜೀವನ ಸುಧಾರಿಸಿದೆ. ಇದೇ ವೇಳೆ ನಿನ್ನೆಯವರೆಗೂ ನೀರಿನಿಂದ ಜಲಾವೃತಗೊಂಡಿದ್ದ ಜಪ್ಪಿನಮೊಗರು ಪ್ರದೇಶದಲ್ಲಿ ಕೂಡಾ ಇಂದು ನೀರು ಇಳಿದು ಹೋಗಿದೆ.
ಮಂಗಳವಾರ ಭಾರೀ ಮಳೆಯಿಂದ ತತ್ತರಿಸಿದ್ದ ಮಂಗಳೂರು ಬುಧವಾರ ಬೆಳಗ್ಗಿನ ವೇಳೆಗೆ ಬಹುತೇಕವಾಗಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಜಪ್ಪಿನಮೊಗರು ಪ್ರದೇಶದ ಸುತ್ತಮುತ ಹಲವೆಡೆ ನೆರೆ ನೀರು ಮಾತ್ರ ಇಳಿದಿರಲಿಲ್ಲ. ನಿನ್ನೆ ಬೆಳಗ್ಗೆಯಿಂದ ಮತ್ತೆ ಈ ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ತೋಡುಗಳ ಅಡೆತಡೆಗಳನ್ನು ನಿವಾರಿಸುವ ಕಾರ್ಯವನ್ನು ನಡೆಸಲಾಗಿತ್ತು.
ಎರಡೇ ದಿನದಲ್ಲಿ ಮತ್ತೆ ಉರಿ ಬಿಸಿಲು!
ಮಂಗಳವಾರ ಬೆಳಗ್ಗಿನಿಂದ ಸುರಿದ ಭಾರೀ ಮಳೆಯಿಂದ ನಗರವೆಲ್ಲಾ ತಂಪಾಗಿತ್ತು. ಎಪ್ರಿಲ್‌ನಿಂದ ಮೇ ತಿಂಗಳ ಸುಮಾರು 23 ತಾರೀಕಿನವರೆಗೆ ಸೂರ್ಯನ ಕಿರಣಗಳಿಗೆ ಮೈಯೊಡ್ಡಲು ಅಸಾಧ್ಯವಾಗಿದ್ದ ಉರಿ ಬಿಸಿಲಿನ ವಾತಾವರಣ ಬಳಿಕ ಗುಡುಗು ಸಿಡಿಲಿನೊಂದಿಗೆ ಅಲ್ಪಸ್ವಲ್ಪವಾಗಿ ಸುರಿದ ಮಳೆಯಿಂದಾಗಿ ಕೊಂಚ ಮಟ್ಟಿಗೆ ತಾಪಮಾನ ತಗ್ಗಿತ್ತು. ಮಂಗಳವಾರ ಸುರಿದ ಮಳೆಯಂತೂ ನಗರದೆಲ್ಲೆಡೆ ಆತಂಕದ ಜತೆಗೆ ತಂಪಿನ ವಾತಾವರಣದ ಹಿತಾನುಭವವನ್ನೂ ನೀಡಿತ್ತು. ಬುಧವಾರವೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಆದರೆ ಇಂದು ಮಾತ್ರ ಎರಡು ದಿನಗಳ ಹಿಂದೆ ನಗರದಲ್ಲಿ ಸುರಿದ ಕುಂಭದ್ರೋಣ ಮಳೆಯ ಕುರುಹೇ ಇಲ್ಲದ ರೀತಿಯಲ್ಲಿ ಬಿಸಿಲಿನ ವಾತಾವರಣ. ಅದ್ಯಾವ ರೀತಿಯಲ್ಲಿ ಮಾಯದಂತ ಮಳೆ ಸುರಿದು ಹೋಯಿತು ಅನ್ನುವಷ್ಟರ ಮಟ್ಟಿಗೆ ಇಂದಿನ ವಾತಾವರಣ ಬದಲಾಗಿಬಿಟ್ಟಿದೆ.
ಎನ್‌ಡಿಆರ್‌ಎಫ್ ತಂಡ ವಾಪಾಸ್ ಬೆಂಗಳೂರಿಗೆ !
ಮಂಗಳವಾರ ಬೆಳಗ್ಗಿನಿಂದ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ನಗರದಲ್ಲಿ ಅಲ್ಲಲ್ಲಿ ಕೃತಕ ನೆರೆ, ಪ್ರವಾಹದ ಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೇಂದ್ರ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್)ವನ್ನು ನಗರಕ್ಕೆ ಕಳುಹಿಸುವಂತೆ ಕೋರಿದ್ದರು. ಅದರಂತೆ ಬೆಂಗಳೂರಿನಿಂದ ಮಂಗಳವಾರ ಮಧ್ಯರಾತ್ರಿಯೇ ಹೊರಟಿದ್ದ ತಂಡ ಬುಧವಾರ ಮುಂಜಾನೆ ವೇಳೆ ಮಂಗಳೂರು ತಲುಪಿತ್ತು. ಅಲ್ಲಿಂದ ಪಡುಬಿದ್ರೆ ತೆರಳಿ ಅಲ್ಲಿ ಮಂಗಳವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ 9ರ ಹರೆಯದ ಬಾಲಕಿ ನಿಧಿ ಆಚಾರ್ಯರನ್ನು ಹುಡುಕುವ ಕಾರ್ಯಾಚರಣೆಯಲ್ಲಿ ತೊಗಡಿಸಿಕೊಂಡಿತ್ತು. ಬಳಿಕ ಸರ್ಕ್ಯೂಟ್‌ಹೌಸ್‌ನಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ರೀತಿಯ ತುರ್ತು ಪರಿಹಾರ ಕಾರ್ಯಾಚರಣೆಗೆ ಸನ್ನದ್ಧವಾಗಿತ್ತು. ಸದ್ಯ ಅವಿಭಜಿತ ಜಿಲ್ಲೆಯು ಭಾರೀ ಮಳೆಯಿಂದ ಸಹಜ ಸ್ಥಿತಿಯತ್ತ ಮರಳಿರುವ ಹಿನ್ನೆಲೆಯಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ತಂಡ ಬೆಂಗಳೂರಿಗೆ ತೆರಳಲು ಸಿದ್ಧವಾಗಿದೆ.
ತುರ್ತು ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಪಾತ್ರ ಮಹತ್ತರ
ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಅಪಾರ ಸಾವು, ನೋವು ಸಂಭವಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಕಾರ್ಯಾಚರಣೆ ನಡೆಸಿತ್ತು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಸೂಚನೆಯ ಮೇರೆಗೆ ತಂಡದ 32 ಸಿಬ್ಬಂದಿ ಮಂಗಳೂರಿಗೆ ಆಗಮಿಸಿದ್ದರು. ತುರ್ತು ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ನಿರ್ವಹಣಾ ದಳ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದೆ. ಈ ಹಿಂದೆ 2016ರಲ್ಲಿ ಅಣಕು ಕಾರ್ಯಾಚರಣೆ ನಡೆಸುವ ಕಾರಣದಿಂದ ನಿರ್ವಹಣಾ ದಳ ಮಂಗಳೂರಿಗೆ ಆಗಮಿಸಿತ್ತು.
‘‘ಮಂಗಳೂರಿನಲ್ಲಿ ಮಳೆಯ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿ ಎದುರಿಗಾದ್ದ ಕಾರಣ ನಾವು ತುರ್ತಾಗಿ ಮಂಗಳೂರಿಗೆ ಆಗಮಿಸಿದ್ದೆವು. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಬೆಂಗಳೂರಿನಲ್ಲಿ 9 ವರ್ಷಗಳ ಹಿಂದೆ ಎನ್‌ಡಿಆರ್‌ಎಫ್ ಆರಂಭಗೊಂಡಿತ್ತು. 2015ರಲ್ಲಿ ನೇಪಾಳದ ಭೂಕಂಪದಲ್ಲಿ 11 ಮಂದಿಯನ್ನು ರಕ್ಷಿಸಿ, 131 ಮೃತದೇಹಗಳನ್ನು ಹೊರ ತೆಗೆದಿದೆ. 2014ರ ಅಸ್ಸಾಂ, ಮೇಘಾಲಯ ಪ್ರವಾಹ, ಕಾನ್ಪುರದ ರೈಲು ಅಪಘಾತ, 2015ರ ಚೆನ್ನೈ ಪ್ರವಾಹ, 2016ರಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹ, ಉತ್ತರಕಾಂಡದ ಕಾಡ್ಗಿಚ್ಚು ಸೇರಿ ಹಲವು ಸಂದರ್ಭಗಳಲ್ಲಿ ಅಪಾಯದಲ್ಲಿದ್ದ 5,52,018 ಮಂದಿಯ ರಕ್ಷಣೆಯನ್ನು ನಮ್ಮ ತಂಡ ಮಾಡಿದೆ’’ ಎಂದು ಎನ್‌ಡಿಆರ್‌ಎಫ್‌ನ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಮಂಗಳವಾರ ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ಎರಡು ಜೀವ ಬಲಿಯೊಂದಿಗೆ ಅಪಾರ ನಷ್ಟವನ್ನು ಅನುಭವಿಸಬೇಕಾಯಿತು. ಇದೀಗ ನಗರ ಸಹಜ ಸ್ಥಿತಿಗೆ ಮರಳಿದೆ. ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳು ಸೇರಿದಂತೆ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ. ಭಾಗಶ: ಹಾಗೂ ಸಣ್ಣಪುಟ್ಟ ತೊಂದರೆಗಳೊಗಾಗಿರುವ ಮನೆಗಳ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಲಾಗುವುದು. ಇದೇ ವೇಳೆ ನಗರದಲ್ಲಿ ಬೀಡುಬಿಟ್ಟಿದ್ದ ಕೇಂದ್ರ ವಿಪತ್ತು ನಿರ್ವಹಣಾ ತಂಡವೂ ಇಂದು ಬೆಂಗಳೂರಿಗೆ ವಾಪಾಸಾಗಲಿದೆ. ಸದ್ಯ ಮುಂದಿನ ಎರಡು ದಿನಗಳವರೆಗೆ ನಗರದಲ್ಲಿ ಭಾರೀ ಮಳೆಯ ಕುರಿತು ಯಾವುದೇ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಇಲ್ಲ. ಈಗಾಗಲೇ ಮುಂಗಾರು ಪ್ರವೇಶ ಆಗಿರುವುದರಿಂದ ಆ ಮಳೆಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ’’
-ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ.







