ಯಕ್ಷ ಕಲೆ ಎಂದೂ ಕ್ಷಯವಾಗದು: ಪಲಿಮಾರುಶ್ರೀ
ಉಡುಪಿ: ಯಕ್ಷ ಕಲಾವಿದರ 20ನೇ ಸಮಾವೇಶ

ಉಡುಪಿ, ಮೇ 31: ಯಕ್ಷ ಕಲೆ ಎಂದಿಗೂ ಕ್ಷಯವಾಗದು. ಅದು ಎಂದೆಂದೂ ಅಕ್ಷಯವಾಗಿರುವುದು ಎಂಬುದನ್ನು ಕರಾವಳಿಯ ಯಕ್ಷಗಾನ ಕಲಾವಿದರು ತೋರಿಸಿಕೊಟ್ಟಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಹಾಗೂ ಪ್ರೊ.ಬಿ.ವಿ.ಆಚಾರ್ಯ ದತ್ತಿ ಯಕ್ಷನಿಧಿಯ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ನಡೆದ ಕರಾವಳಿಯ ಯಕ್ಷಗಾನ ಕಲಾವಿದರ 20ನೇ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು.
ಈ ಯಕ್ಷ ಕಲಾವಿದರ ಸಮಾವೇಶ ಎಂಬುದು ಇಂದು ಯಕ್ಷಗಾನದ ವಾರ್ಷಿಕ ಜಾತ್ರಾ ಮಹೋತ್ಸವದಂತಾಗಿದೆ. ಎಲ್ಲಾ ಕಲಾವಿದರು ತಮ್ಮ ಜಾತಿ, ಮತ, ಧರ್ಮಗಳನ್ನು ಮರೆತು ಒಂದಾಗಿ ಬೆರೆಯುವುದು ವಿಶೇಷ ಅನುಭವ. ಯಕ್ಷಗಾನ ಆರು ತಿಂಗಳ ಕಾಲ ನಡೆಯುವ ಕಲೆ. ಆದರೆ ಯಕ್ಷ ಕಲಾವಿದರು ವರ್ಷದ 12 ತಿಂಗಳೂ ಯಕ್ಷ ಕಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ವತಿಯಿಂದ ಯಕ್ಷಗಾನ ಕಲಾವಿದರಿಗೆ ಕೊಡಲ್ಪಟ್ಟ ಆರೋಗ್ಯ ವಿಮೆ (ಮೆಡಿಕ್ಲೈಮ್), ಅಫಘಾತ ವಿಮೆ, ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಹಾಗೂ ಸಂಕಷ್ಟದಲ್ಲಿರುವ ಕಲಾವಿದರಿಗೆ ವಿಶೇಷ ಸಹಾಯಧನವನ್ನು ಪಲಿಮಾರು ಶ್ರೀಗಳು ಕಲಾವಿದರಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಕಾಸರಗೋಡಿನ ಕಲಾವಿದರಾದ ತಿಮ್ಮಪ್ಪ ಅವರು ಪ್ರಶಸ್ತಿಯೊಂದನ್ನು ನೀಡಲು ಒಂದು ಲಕ್ಷ ರೂ.ಗಳ ದತ್ತಿನಿಧಿಯನ್ನು ಶ್ರೀಗಳ ಮೂಲಕ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್‌ಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ, ಉಡುಪಿಯ ಪ್ರಸಂಗಕರ್ತಅಗರಿ ಭಾಸ್ಕರ ರಾವ್, ಸುರತ್ಕಲ್‌ನ ಉದ್ಯಮಿ ಅಗರಿ ರಾಘವೇಂದ್ರ ರಾವ್, ಮಲ್ಪೆಯ ಉದ್ಯಮಿ ಹರಿಯಪ್ಪ ಕೋಟ್ಯಾನ್, ಕಲಾರಂಗದ ಎಸ್.ವಿ.ಭಟ್ ಹಾಗೂ ಗಂಗಾಧರ ರಾವ್ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ 9ರಿಂದ 11ರವರೆಗೆ ಕಲಾವಿದರ ಆರೋಗ್ಯ ತಪಾಸಣೆ, ಕಲಾವಿದರಿಂದ ಕಲಾ ಪ್ರಸ್ತುತಿ ಹಾಗೂ 20ನೇ ವಾರ್ಷಿಕ ಮಹಾಸಭೆ ನಡೆಯಿತು.







