ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅನುತ್ತೀರ್ಣ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ
ಪಲ್ವಲ್, ಮೇ31: ಇಲ್ಲಿನ ಶಾಲೆಯ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಹರ್ಯಾಣ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಶಿಕ್ಷಣ ವಿಭಾಗ ಆಗ್ರಹಿಸಿದೆ. ಪಲ್ವಲ್‌ನ ದೀಗೋಟ್ ಹಿರಿಯ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುವ ಎಲ್ಲ 51 ವಿದ್ಯಾರ್ಥಿಗಳು ಹರ್ಯಾಣ ಮಂಡಳಿ ಹತ್ತನೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಾರೆ ಎಂದು ಪಲ್ವಲ್ ಜಿಲ್ಲಾ ಶಿಕ್ಷಣಾಧಿಕಾರಿ ಸುಮನ್ ನೈನ್ ತಿಳಿಸಿದ್ದಾರೆ. ಶಾಲೆಯ ಕಳಪೆ ಫಲಿತಾಂಶದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರಕಾರದ ಆದೇಶಿಸಿರುವ ಬೆನ್ನಲ್ಲೇ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಪಲ್ವಲ್‌ನ ಸಹಾಯ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ನೈನ್ ತಿಳಿಸಿದ್ದಾರೆ.
ಶಾಲೆಯ ಕಳಪೆ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ಗ್ರಾಮಸ್ಥರು ಬುಧವಾರದಂದು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಕಳೆದ ತಿಂಗಳು ಘೊಷಣೆ ಮಾಡಲಾಗಿತ್ತು. ಶೇ.51.15 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಶೇ. 55.34 ಫಲಿತಾಂಶದೊಂದಿಗೆ ಹೆಣ್ಮಕ್ಕಳು ಹುಡುಗರಿಗಿಂತ ಮೇಲುಗೈ ಸಾಧಿಸಿದ್ದರು.





