ಪರಿಷತ್ತಿನ 11 ಸ್ಥಾನಗಳಿಗೆ ಅವಿರೋಧ ಆಯ್ಕೆ ಸಾಧ್ಯತೆ

ಬೆಂಗಳೂರು, ಮೇ 31: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮತದಾನ ನಡೆಯದೆ ಅವಿರೋಧ ಆಯ್ಕೆ ಸಾಧ್ಯತೆ ಬಹುತೇಕ ಖಚಿತವಾದಂತಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ(ಮೇ 31)ವಾದ ಇಂದು ಕಾಂಗ್ರೆಸ್ ಪಕ್ಷದಿಂದ ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹೀಂ, ಅರವಿಂದ ಕುಮಾರ್ ಅರಳಿ ಹಾಗೂ ಕೆ.ಹರೀಶ್ ಕುಮಾರ್ ತಮ್ಮ ನಾಮಪತ್ರ ಸಲ್ಲಿಸಿದರು.
ಅದೇ ರೀತಿ ಜೆಡಿಎಸ್ ಪಕ್ಷದಿಂದ ಬಿ.ಎಂ.ಫಾರೂಕ್, ಎಸ್.ಎಲ್. ಧರ್ಮೇಗೌಡ, ಬಿಜೆಪಿಯಿಂದ ರುದ್ರೇಗೌಡ, ರಘುನಾಥ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್.ರವಿಕುಮಾರ್ ಹಾಗೂ ಕೆ.ಪಿ.ನಂಜುಂಡಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ನಾಮಪತ್ರ ಪರಿಶೀಲನೆ: ಜೂನ್ 1ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂ.4ರಂದು ಕೊನೆಯ ದಿನವಾಗಿದೆ. 11ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರಷ್ಟೇ ಚುನಾವಣೆ ನಡೆಯಲಿದೆ. 11 ಸ್ಥಾನಗಳಿಗೆ 11 ಮಂದಿ ಅಭ್ಯರ್ಥಿಗಳಷ್ಟೇ ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆ ಬಳಿಕ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.
ಜೂನ್ 11ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಚುನಾವಣಾ ನಿಗದಿಪಡಿಸಿದ್ದು, ಆ ದಿನ ಸಂಜೆ 5ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಬೇಕಿತ್ತು. ಇದೀಗ ಅವಿರೋಧ ಆಯ್ಕೆಯನ್ನು ಅದೇ ದಿನ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಮ್, ಮೋಟಮ್ಮ, ಡಿ.ಎಸ್.ವೀರಯ್ಯ, ಸೈಯದ್ ಮುದೀರ್ ಆಗಾ, ಸೋಮಣ್ಣ ಬೇವಿನಮರದ, ರಘುನಾಥ್‌ರಾವ್ ಮುಲ್ಕಾಪುರೆ, ಭಾನುಪ್ರಕಾಶ್, ಸಿ.ಎಂ.ಇಬ್ರಾಹೀಂ, ಕೆ.ಗೋವಿಂದರಾಜ್ ಹಾಗೂ ಬಿ.ಎಸ್.ಸುರೇಶ್ ಸೇರಿ 11 ಸದಸ್ಯರ ಅವಧಿ ಇದೇ ಜೂನ್ 17ಕ್ಕೆ ಮುಗಿಯಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ.
ಕಾಂಗ್ರೆಸ್-: ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹೀಂ, ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್.
ಬಿಜೆಪಿ: ರುದ್ರೇಗೌಡ, ರಘುನಾಥ ಮಲ್ಕಾಪುರೆ, ತೇಜಸ್ವಿನಿ ಗೌಡ, ಎನ್.ರವಿ ಕುಮಾರ್, ಕೆ.ಪಿ.ನಂಜುಂಡಿ.
ಜೆಡಿಎಸ್: ಬಿ.ಎಂ.ಫಾರೂಕ್, ಎಸ್.ಎಲ್. ಧರ್ಮೇಗೌಡ.







